ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ದಾಖಲಾತಿ, ಶಾಲಾರಂಭದ ದಿನಾಂಕ ಪ್ರಕಟಿಸಿದ್ದರೂ ಶುಲ್ಕದ ಗೊಂದಲವನ್ನು ಮಾತ್ರ ಸರಕಾರ ಬಗೆಹರಿಸಿಲ್ಲ.
2020-21ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಬೋಧನ ಶುಲ್ಕದಲ್ಲಿ ಶೇ. 30ರಷ್ಟು ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ. ಜೂ. 15ರಿಂದ ದಾಖಲಾತಿ ಆರಂಭವಾಗಿ, ಜು. 1ರಿಂದ ತರಗತಿಗಳು ಪ್ರಾರಂಭ ವಾಗಲಿವೆ. ಆದರೆ ಹೆತ್ತವರು ಶುಲ್ಕ ಪಾವತಿಗೆ ಹಿಂದೇಟು ಹಾಕುತ್ತಿದ್ದಾರೆ.
ಪ್ರತ್ಯಕ್ಷ ತರಗತಿಗಳು ನಡೆಯದೆ ಇರುವುದರಿಂದ ಪೂರ್ಣ ಶುಲ್ಕ ಕಟ್ಟುವುದಿಲ್ಲ ಎಂಬ ವಾದ ಹೆತ್ತವರದು. ಖಾಸಗಿ ಶಾಲೆಗಳು ಪೂರ್ಣ ಶುಲ್ಕಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿವೆ. ಕೊರೊನಾ ಅಲೆಯ ತೀವ್ರತೆ ಮತ್ತು ಮೂರನೇ ಅಲೆಯ ನಿರೀಕ್ಷಿತ ಅಂದಾಜಿನ ಹಿನ್ನೆಲೆಯಲ್ಲಿ ಶುಲ್ಕ ನಿರ್ಧಾರ ಸರಕಾರಕ್ಕೆ ಸವಾಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಬದಲಾಗಿ 2019-20ರಲ್ಲಿ ಇದ್ದ ಶುಲ್ಕವನ್ನೇ ಪಡೆಯಲು ಅವಕಾಶ ಕೋರಿವೆ. ಆದರೆ ಸರಕಾರವು ಕಳೆದ ವರ್ಷ ಶೇ. 30ರಷ್ಟು ಶುಲ್ಕ ಕಡಿತ ಮಾಡಿದ್ದು, ಅದನ್ನೇ ಮುಂದುವರಿಸಲು ಚಿಂತನೆ ನಡೆಸುತ್ತಿದೆ. ಹೀಗಾಗಿ ನಿರ್ಧಾರ ಆಗಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ವಾರದೊಳಗೆ ನಿರ್ಧಾರ ಆಗಬೇಕು
ಜೂ. 15ರಿಂದ ಮುಂದಿನ ವರ್ಷದ ದಾಖಲಾತಿ ಆರಂಭವಾಗಲಿದೆ. ಈ ಮಧ್ಯೆ ಕೆಲವು ಖಾಸಗಿ ಶಾಲಾಡಳಿತ ಮಂಡಳಿಗಳು ನಿಯಮಬಾಹಿರವಾಗಿ ಹೆತ್ತವರಿಂದ ಶುಲ್ಕ ವಸೂಲಿಗೆ ಮುಂದಾಗಿವೆ. ಈ ಸಂಬಂಧ ರಾಜಧಾನಿಯ ಕೆಲವು ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಇದೆಲ್ಲವನ್ನು ತಪ್ಪಿಸಲು ನಿಟ್ಟಿನಲ್ಲಿ ಸರಕಾರ ಈ ವಾರದ ಅಂತ್ಯದೊಳಗೆ ಶುಲ್ಕ ನಿರ್ಧಾರ ಮಾಡಬೇಕಿದೆ. ಜೂ. 15ರೊಳಗೆ ನಿರ್ಧಾರ ಪ್ರಕಟಿಸದೆ ಇದ್ದರೆ ಶುಲ್ಕ ಪಾವತಿ ಹೆತ್ತವರಿಗೆ ಕಷ್ಟವಾಗಲಿದೆ.