ಬೆಂಗಳೂರು: ಕೋವಿಡ್ ಮಹಾಮಾರಿಯ ಹಿನ್ನಲೆಯಲ್ಲಿ ಮತ್ತು ಲಾಕ್ ಡೌನ್ ಸ್ಥಿತಿ ಸದ್ಯಕ್ಕೆ ಚಾಲನೆಯಲ್ಲಿರುವುದರಿಂದ ರಾಜ್ಯದಲ್ಲಿ ಶಾಲೆಗಳ ಪುನರಾರಂಭ ವಿಚಾರದಲ್ಲಿ ರಾಜ್ಯ ಸರಕಾರ ಇನ್ನೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಈ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಶಾಲೆಗಳನ್ನು ತರಾತುರಿಯಲ್ಲಿ ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಈ ವಿಚಾರದಲ್ಲಿ ರಾಜ್ಯದಲ್ಲಿನ ಪೋಷಕರು ಅನಗತ್ಯ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಶಾಲೆಗಳ ಪುನರಾರಂಭ ವಿಚಾರವಾಗಿ ವಿವಿಧ ಮಾಧ್ಯಮಗಳಲ್ಲಿ ಬರುತ್ತಿರುವ ಕೆಲವೊಂದು ಮಾಹಿತಿಗಳು ಅಧಿಕೃತವಲ್ಲ ಮತ್ತು ಈ ಕುರಿತಾಗಿ ಶಿಕ್ಷಣ ಇಲಾಖೆಯಾಗಲಿ ಸರಕಾರವಾಗಲೀ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವ ಸುರೇಶ್ ಕುಮಾರ್ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿರುವ ಕೆಲ ಖಾಸಗಿ ಶಾಲೆಗಳು ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳಿಗೂ ಆನ್ ಲೈನ್ ತರಗತಿ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸುರೇಶ್ ಕುಮಾರ್ ಅವರು ಗರಂ ಆಗಿದ್ದಾರೆ. ಮತ್ತು ಇಂತಹ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಸಚಿವರು ನೀಡಿದ್ದಾರೆ.