ಮಹಾನಗರ: ರಜೆಯ ಮಜಾ ಮುಗಿಸಿ ಬಿಸಿಲಿನ ಧಗೆಯ ನಡುವೆ ಹೊಸ ತರಗತಿಗಳಿಗೆ ಆಗಮಿಸಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಶುಭ ಹಾರೈಸಿ ಸ್ವಾಗತಿಸಿದರು.
ಕೋಡಿಕಲ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಶಾಲೆ ಕಡೆ ನನ್ನ ನಡೆ ಶಾಲೆಗೆ ಮರಳಲು ನನಗೊಂದು ಅವಕಾಶ ಎಂಬ ಘೋಷವಾಕ್ಯದಡಿ ದ. ಕ. ಜಿ. ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಕಾರ್ಯಕ್ರಮವನ್ನು ಬುಧವಾರ ಅವರು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಎಲ್ಲರಿಗೂ ಶಿಕ್ಷಣದ ಹಕ್ಕು ಕಾಯಿದೆ ಜಾರಿಯಿಂದ ಶಿಕ್ಷಣ ಲಭ್ಯವಾಗಿದೆ. ಜಿಲ್ಲೆಯಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾದಂದಿನಿಂದ ಸಂಪೂರ್ಣ ಶೈಕ್ಷಣಿಕ ವಲಯದ ಚಿತ್ರಣ ಬದಲಾಗಿದೆ. ಜತೆಗೆ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಕಲಿತ ಸಾಧಕ ಮಕ್ಕಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಿದ ಅವರು, ಸರಕಾರಿ ಶಾಲೆಗಳಲ್ಲಿ ಬೆಳೆದ ಮಕ್ಕಳು ಸಮಾಜಮುಖೀಯಾಗಿ, ನಿಸ್ವಾರ್ಥದಿಂದ ಗಟ್ಟಿಗರಾಗುತ್ತಾರೆ ಎಂದು ತಿಳಿಸಿದರು.
ಉತ್ತಮ ಶಿಕ್ಷಣ
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳೊಂದಿಗಿನ ಪೈಪೋಟಿಯ ನಡುವೆ ಸರಕಾರಿ ಶಾಲೆಗಳು ಜಿಲ್ಲೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿವೆಎಂದು ಶ್ಲಾಘಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ವಲಯದ ಮಂಜುಳಾ ಕಾರ್ಯಕ್ರಮದ ಆಶಯವನ್ನು ವಿವರಿ ಸಿದರು. ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಶಿವರಾಮಯ್ಯ ಮಾತನಾಡಿ, ಯಾರೂಶಿಕ್ಷಣದಿಂದ ವಂಚಿತವಾಗಬಾರದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಶಾಲೆ ಕಡೆ ನನ್ನ ನಡೆ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಜಿಲ್ಲಾ ಉಪಯೋಜನ ಸಮನ್ವಯ ಅಧಿಕಾರಿ ಲೋಕೇಶ್ ಸ್ವಾಗತಿಸಿದರು. ಸಿಡಿಪಿಒ ಶ್ಯಾಮಲಾ, ವೆಲೊರೆಡ್ ಸಂಸ್ಥೆಯ ಕಸ್ತೂರಿ, ಎಸ್‌ಡಿಎಂಸಿಯ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಹಾಬಲ ಚೌಟ ಪಾಲ್ಗೊಂಡರು. ಮಂಜುಳಾ ನಿರೂಪಿಸಿದರು.