Advertisement

28ಕ್ಕೆ ಶಾಲಾ ಪ್ರಾರಂಭೋತ್ಸವ: ಸಿದ್ಧತೆ

02:52 PM May 24, 2018 | |

ಕೋಲಾರ: ಜಿಲ್ಲಾದ್ಯಂತ ಹಬ್ಬದ ವಾತಾವರಣದಡಿ ಶೈಕ್ಷಣಿಕ ಕಾರ್ಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಮೇ 28 ರಿಂದ ಸರ್ಕಾರಿ ಶಾಲೆಗಳು ಕಾರ್ಯಾರಂಭಗೊಳ್ಳಲು ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ಮೇ 31ರವರೆಗೆ ವಿಶೇಷ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸ್ವಾಮಿ ತಿಳಿಸಿದ್ದಾರೆ.

Advertisement

ತಮ್ಮ ಕಚೇರಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಹಾಗೂ ಶಿಕ್ಷಣ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒ ಮಾರ್ಗದರ್ಶನದಲ್ಲಿ ಪ್ರಸಕ್ತ ಸಾಲಿನಲ್ಲಿ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ದಾಖಲಾತಿ ಆಂದೋಲನ: ಮೇ 16 ರಿಂದ 31 ರವರೆಗೂ ದಾಖಲಾತಿ ಆಂದೋಲನ ನಡೆಸುತ್ತಿದ್ದು, ಕಳೆದ ವರ್ಷ ಇಡೀ ರಾಜ್ಯದಲ್ಲಿ 6ರಿಂದ 14 ರ ವಯೋಮಿತಿಯ 6,803 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಆ ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರುವುದೇ ಈ ವಿಶೇಷ ಆಂದೋಲನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕರಪತ್ರ ಹಂಚಿ ವ್ಯಾಪಕ ಪ್ರಚಾರ: ಆಂದೋಲನ ವನ್ನು ಜನವಸತಿ, ಶಾಲೆ, ಕ್ಲಸ್ಟರ್‌, ಬ್ಲಾಕ್‌, ಜಿಲ್ಲಾ ಹಂತದಲ್ಲಿ ಆಯೋಜಿಸಲಾಗುತ್ತಿದೆ. ಶಿಕ್ಷಣದ ಸಾರ್ವತ್ರೀ ಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಒದಗಿಸುತ್ತಿರುವ ಸೌಲಭ್ಯಗಳಾದ ಉಚಿತ ಪಠ್ಯಪುಸ್ತಕ ವಿತರಣೆ, ಬಿಸಿಯೂಟ, ಯೋಜನೆ ಕ್ಷೀರಭಾಗ್ಯ, ಶೂ, ಸಾಕ್ಸ್‌ ವಿತರಣೆ, ಸೈಕಲ್‌ ವಿತರಣೆ ಉಚಿತ ವಿದ್ಯಾರ್ಥಿನಿಲಯಗಳ ಕುರಿತು ಕರಪತ್ರ ಹಂಚಿ ವ್ಯಾಪಕ ಪ್ರಚಾರ ನಡೆಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಶಾಲೆ ಬಿಟ್ಟ ಮಕ್ಕಳ ದಾಖಲಾತಿ: ಆಂದೋಲನದಲ್ಲಿ ಬಾಲ್ಯ ವಿವಾಹ ಅಥವಾ ಇನ್ನಿತರ ಕಾರಣಗಳಿಂದ ಶಾಲೆ ಬಿಟ್ಟಿದ್ದಲ್ಲಿ ಅಂತಹ ಮಕ್ಕಳ ಪೋಷಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಘಟಕದ ಕಾರ್ಯಕರ್ತೆಯರ ಸಹಾಯ ಪಡೆದು ಮನವೊಲಿಸಿ ಶಾಲೆಗೆ ಕರೆತರಲು ಸೂಚಿಸಲಾಗಿದೆ ಎಂದರು.
 
ಜೂ.1ರಿಂದ ದಾಖಲಾತಿ ಆಂದೋಲನ: ವಿಶೇಷ ದಾಖಲಾತಿ ಆಂದೋಲನದ ಜತೆಗೆ 6 ರಿಂದ 14 ವಯೋಮಿತಿಯ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗುವುದನ್ನು ಖಾತರಿಪಡಿಸಿಕೊಳ್ಳಲು ಜೂ.1 ರಿಂದ 30ರವರೆಗೂ ಸಾಮಾನ್ಯ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಲು ಸೂಚಿಸಿದ ಅವರು, 2017-18ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಈ ವರ್ಷ ಮುಂದಿನ ತರಗತಿಗೆ ದಾಖಲಾಗಿರುವ ಕುರಿತು ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ಖಾತರಿಪಡಿಸಿಕೊಳ್ಳಬೇಕೆಂದು ಹೇಳಿದರು.

Advertisement

ಶಾಲಾ ಹಬ್ಬ ಆಚರಿಸಲು ಸೂಚನೆ: ಒಂದು, ಆರನೇ ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭವಾಗಿರುವಂತೆ ಅಧ್ಯಾಪಕರು ನಡೆಸಿಕೊಳ್ಳಬೇಕು. ಇದು ಮಕ್ಕಳ ವ್ಯಾಸಂಗದ ಅವಧಿಯನ್ನು ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡುತ್ತದೆ.

ಮೇ 28 ರಂದು ಪ್ರತಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಗ್ರಾಮದ ಗಣ್ಯರನ್ನು ಕರೆಸಿ ಶಾಲಾ ಹಬ್ಬವನ್ನು ಸಡಗರದಿಂದ ಆಚರಿಸಬೇಕು ಮತ್ತು ಅಂದು ಮಕ್ಕಳಿಗೆ ಸಿಹಿ ಹಂಚಲು ಸೂಚಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಶಾಲಾ ಮಿಂಚಿನ ಸಂಚಾರದ ಜಿಲ್ಲಾ ಮಟ್ಟದ ತಂಡದಲ್ಲಿ ಡಿಡಿಪಿಐ ಆಡಳಿತ, ಡಿಡಿಪಿಐ ಡಯಟ್‌, ಡಯಟ್‌ ಹಿರಿಯ ಉಪನ್ಯಾಸಕರ ತಂಡಗಳು, ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್‌ ನೇತೃತ್ವದಲ್ಲಿ ಶಾಲೆಗಳಿಗೆ ಭೇಟಿ ನೀಡಬೇಕು. ತಾಲೂಕು ಮಟ್ಟದಲ್ಲಿ ಬಿಇಒ, ಬಿಆರ್‌ಸಿ, ಸಿಆರ್‌ಪಿಗಳ ತಂಡಗಳು ಪ್ರತಿ ಶಾಲೆಗೂ ತೆರಳಿ ಪರಿಶೀಲಿಸಲು ಕಾರ್ಯ ಯೋಜನೆ ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿದೆ. ಮಿಂಚಿನ ಸಂಚಾರಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಜಿಲ್ಲೆಯ ಪ್ರತಿ ಶಾಲೆಗೆ ಭೇಟಿ ನೀಡಿ ಕನಿಷ್ಠ 30 ರಿಂದ 40 ನಿಮಿಷ ಪರಿಶೀಲನೆ ನಡೆಸಿ, ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ದಾಖಲಿಸುವರು.

ಮಿಂಚಿನ ಸಂಚಾರದ ಜಿಲ್ಲಾ ತಂಡದಲ್ಲಿ ಡಿವೈಪಿಸಿಗಳಾದ ಜಯರಾಜ್‌, ಶ್ರೀನಿವಾಸಮೂರ್ತಿ, ಶಿಕ್ಷಣಾಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ವಿಷಯ ಪರೀಕ್ಷಕರಾದ ರಾಜಣ್ಣ, ಮಲ್ಲಿಕಾರ್ಜುನಾಚಾರಿ, ನರಸಿಂಹ ರೆಡ್ಡಿ, ಎವೈಪಿಸಿಳಾದ ಮೈಲಾರಪ್ಪಮತ್ತಿತರರು ಇರುತ್ತಾರೆ. ತಾಲೂಕು ಮಟ್ಟದ ತಂಡಗಳಲ್ಲಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ರಘುನಾಥ ರೆಡ್ಡಿ, ಕೆಂಪರಾಮು, ಸುರೇಶ್‌, ಷಂಷೂನ್ನಿಸಾ ಮತ್ತಿತರರು ನೇತೃತ್ವ ವಹಿಸುವರು ಎಂದು ಮಾಹಿತಿ ನೀಡಿದರು.

ವ್ಯಾಸಂಗದ ಅವಧಿಯಲ್ಲಿ ಶಾಲಾ ಪ್ರಾರಂಭದ ದಿನವನ್ನು ಮಕ್ಕಳ ಮನಸಿನಲ್ಲಿ ಸ್ಥಿರವಾಗಿ ನಿಲ್ಲುವ ರೀತಿ ಹಬ್ಬದಂತೆ ಆಚರಿಸಬೇಕು. ಆ ಮೂಲಕ ಅವರಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆಯಂತೆ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳು ಮೇ 28 ರಂದು ಆರಂಭಗೊಂಡು ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆಗಳನ್ನು ನಡೆಸಬೇಕು. ಅಂದು ಶಾಲಾ ಆವರಣ, ಕೊಠಡಿಗಳನ್ನು ಸ್ವತ್ಛಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲು ಸೂಚಿಸಲಾಗಿದೆ.
 ಸ್ವಾಮಿ, ಡಿಡಿಪಿಐ

ಮೇ 30ರಿಂದ ಮಿಂಚಿನ ಸಂಚಾರ ಜಿಲ್ಲಾದ್ಯಂತ ಮೇ 30 ರಿಂದ ಜೂ.6 ರವರೆಗೂ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಮಿಂಚಿನ ಸಂಚಾರ ನಡೆಸಿ ಪ್ರತಿ ಶಾಲೆಗೂ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಡಿಡಿಪಿಐ ಆಡಳಿತ ಹಾಗೂ ಡಿಡಿಪಿಐ ಅಭಿವೃದ್ಧಿ ಇವರ ನೇತೃತ್ವದಲ್ಲಿ ಸಭೆ ನಡೆಸಿ, ಶಾಲೆಗಳಿಗೆ ಭೇಟಿ ನೀಡುವ ಕಾರ್ಯಸೂಚಿ ತಯಾರಿಸಲಾಗಿದೆ ಎಂದು ಡಿಡಿಪಿಐ ಸ್ವಾಮಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next