ಬೆಂಗಳೂರು: ರಾಜ್ಯದಲ್ಲಿ ಮೇ 16ರಿಂದ ಶಾಲೆಗಳಲ್ಲಿ ಚಿಣ್ಣರ ಕಲರವ ಕೇಳಲಿದೆ. ಆ ಹಿನ್ನೆಲೆಯಲ್ಲಿ ಶಾಲಾ ಕಾರ್ಯಾರಂಭಕ್ಕೂ ಮುನ್ನ ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಪೂರ್ವ ಸಿದ್ಧತಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.
ಶಾಲಾ ಪ್ರಾರಂಭದ ಮುನ್ನಾ ದಿನವೇ ಅಂದರೆ ಮೇ 15ರಂದು ಶಾಲಾ ಆವರಣ, ಶಾಲಾ ತರಗತಿ, ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ ಇತ್ಯಾದಿಗಳನ್ನು ಸ್ವತ್ಛಗೊಳಿಸುವುದು ಶಾಲಾ ಸುರಕ್ಷತೆ, ಕುಡಿಯುವ ನೀರು, ಶೌಚಾಲಯಗಳ ಸುಸ್ಥಿತಿಯ ಬಗ್ಗೆ ಪರಿಶೀಲಿಸುವಂತೆ ಎಲ್ಲ ಶಾಲೆಗಳ ಶಿಕ್ಷಕರು ಮತ್ತು ಸಿಬಂದಿಗಳಿಗೆ ಸೂಚಿಸಲಾಗಿದೆ.
ಶಾಲೆಗಳನ್ನು ತಳಿರು-ತೋರಣ ಹಾಗೂ ರಂಗೋಲಿಗಳಿಂದ ಆಲಂಕರಿಸುವುದು. ಮಧ್ಯಾಹ್ನ ಮಕ್ಕಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಪೋಷಕರು, ಹಿರಿಯ ವಿದ್ಯಾರ್ಥಿಗಳು, ಜನಪ್ರತಿನಿಧಿಗಳಿಗೆ ಆಹ್ವಾನಿಸಿ ಶಾಲಾ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಿ ಎಂದು ತಿಳಿಸಲಾಗಿದೆ.
ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನ ಶಾಲಾ ಪ್ರಾರಂಭದ ದಿನ ಮಕ್ಕಳಿಗೆ ಸಿಹಿ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಹಾಗೆಯೇ ಸರಕಾರದ ಪ್ರೋತ್ಸಾಹ ಸಾಮಗ್ರಿಗಳನ್ನು ಎಲ್ಲರ ಸಮ್ಮುಖದಲ್ಲಿ ವಿತರಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
Related Articles
ಶಾಲೆಗಳಲ್ಲಿ ಮಳೆಬಿಲ್ಲಿನ ರಂಗು
ಬೆಂಗಳೂರು: ಕಳೆದ ಎರಡು ವರ್ಷಗಳ ಕಾಲ ಮನೆಯಲ್ಲಿಯೇ ಇರುವ ಮಕ್ಕಳು ಶಾಲೆಗೆ ಬಂದ ತಕ್ಷಣ ಪಾಠಗಳಿಗೆ ಹೊಂದಿರುವುದು ಕಷ್ಟವಾಗಲಿದೆ ಎಂದು ಅರಿತಿರುವ ಶಿಕ್ಷಣ ಇಲಾಖೆ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಿಸುವುದಕ್ಕಾಗಿ ಶಾಲಾರಂಭದ ಎರಡು ವಾರಗಳ ಕಾಲ “ಮಳೆಬಿಲ್ಲು’ ಎಂಬ ಕಾರ್ಯಕ್ರಮ ರೂಪಿಸಿದೆ. ಕಲಿಕೆಗೆ ಪೂರಕವಾಗಿ ಚಿತ್ರ ಬರೆಯುವುದು, ಕತೆ ಹೇಳುವುದು, ನಾಟಕ ಮಾಡಿಸುವುದು, ಕವಿತೆ ರಚನೆ, ಗಾಯನ, ಆಟೋಟಗಳ ಮೂಲಕ ಇತಿಹಾಸ ತಿಳಿಸುವುದು ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನು “ಮಳೆಬಿಲ್ಲು’ ಕಾರ್ಯಕ್ರಮದಲ್ಲಿ ರೂಪಿಸಲಾಗಿದೆ.