Advertisement

ತಾವರಗೇರಾ ಶಾಲಾವರಣ ಉದ್ಯಾನವನ

02:26 PM Jun 05, 2022 | Team Udayavani |

ತಾವರಗೇರಾ: ಬರಡು ಭೂಮಿಯಲ್ಲಿಯ ತಾಂಡಾದ ಶಾಲೆಯೊಂದರಲ್ಲಿ ಪರಿಸರ ಪ್ರೇಮಿ ಶಿಕ್ಷಕರೊಬ್ಬರು ಶಾಲಾವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸುವ ಮೂಲಕ ಉದ್ಯಾನವನವನ್ನಾಗಿ ಮಾಡಿದ್ದಾರೆ.

Advertisement

ಇದು ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ರಾಮಜೀ ನಾಯ್ಕ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಸಿ ನೆಟ್ಟು ಬೆಳಸಲಾಗುತ್ತಿದೆ. 29-08-2011ರಲ್ಲಿ ಶಾಲಾ ಕಟ್ಟಡ ಉದ್ಘಾಟನೆ ಮಾಡಲಾಯಿತು. ನಂತರ ಶಾಲೆ ಮುಖ್ಯ ಶಿಕ್ಷಕ ಶಂಕರ ರಾಠೊಡ ಶಾಲಾವರಣ ಸ್ವತ್ಛಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ 62 ಬೇವಿನ ಮರ, 8 ಅಶೋಕ ಮರ, 4 ಕರಿಬೇವು, 5 ಹೊಂಗೆ, 4 ಸಂಕೇಶ್ವರ, 5 ಸೀತಾಫಲ, 1 ಹೆಬ್ಬೇವು ಸೇರಿದಂತೆ ಒಟ್ಟು 88 ಸಸಿಗಳನ್ನು ನೆಟ್ಟಿದ್ದಾರೆ.

ತಮ್ಮ ಕೆಲಸದ ಜೊತೆಗೆ ಗಿಡ ಮರಗಳನ್ನು ಬೆಳೆಸುವ ಉದ್ದೇಶದಿಂದ ತಾಂಡಾ ಜನರ ಸಹಕಾರದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಮರಗಳನ್ನು ಬೆಳೆಸಿದ್ದಾರೆ. ಬರಡು ಭೂಮಿಯಾಗಿದ್ದ ಶಾಲಾವರಣವು ಈಗ ಉದ್ಯಾನವನದಂತೆ ಕಂಗೊಳಿಸುತ್ತಿದ್ದು, ತಾಂಡಾ ಸೇರಿದಂತೆ ತಾಲೂಕಿನ ಸಾರ್ವಜನಿಕರ ಮೆಚ್ಚುಗೆಗೆ ಶಾಲಾ ಮುಖ್ಯಗುರು ಶಂಕರ್‌ ರಾಠೊಡ ಪಾತ್ರರಾಗಿದ್ದಾರೆ.

ಹಿಂದುಳಿದ ತಾಂಡಾದ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಪರಿಸರ ಪ್ರೇಮದ ಕುರಿತು ತಿಳಿಸಿ ನೆರಳಿನಲ್ಲಿ ಪಾಠ ಮಾಡಲು ಅನುಕೂಲ ಕಲ್ಪಿಸಿದ್ದಾರೆ. ಗ್ರಾಪಂ ವತಿಯಿಂದ ಶಾಲಾ ಕಾಂಪೌಂಡ್‌ ನಿರ್ಮಿಸಿಕೊಡಲಾಗಿದೆ. –ಉಮೇಶ ರಾಠೊಡ್‌, ಗ್ರಾಪಂ ಮಾಜಿ ಸದಸ್ಯ ಕಿಲ್ಲಾರಹಟ್ಟಿ

ಮುಖ್ಯಗುರು ರಾಠೊಡ ಅವರ ಹಲವು ಶ್ರಮದಿಂದಾಗಿ ಶಾಲಾವರಣದಲ್ಲಿ ಸಸಿಗಳು ಹೆಮ್ಮರವಾಗಿ ಬೆಳೆದು ವಿದ್ಯಾರ್ಥಿಗಳಿಗೆ ಸುಂದರವಾದ ವಾತಾವರಣ ಕಲ್ಪಿಸಿದೆ. ಇವರು ಶಿಕ್ಷಣ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನೀಲಕಂಠಪ್ಪ ಕೊರ್ಲಿ, ಶಿಕ್ಷಕ      -ಎನ್‌. ಶಾಮೀದ್‌

Advertisement

ಮುಧೋಳ ಯುವಕರ ಪರಿಸರ ಕಾಳಜಿ

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದಲ್ಲಿ ಸಮಾನ ಮನಸ್ಕ ಯುವಕರು ಹಸಿರೇ ಉಸಿರು ಎಂಬ ತಂಡದೊಂದಿಗೆ ಯಾವುದೇ ಪ್ರಚಾರವಿಲ್ಲದೇ ಪರಿಸರ ಕಾಳಜಿ ಮೆರೆಯುತ್ತಿರುವುದು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ತ್ರಿಲಿಂಗೇಶ್ವರ ಪ್ರೌಢಶಾಲೆ ಆವರಣದಲ್ಲಿ ಅರಣ್ಯ ಇಲಾಖೆ ವಿತರಿಸಿದ ವಿವಿಧ ತಳಿಯ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದೆ.

ಈ ತಂಡಕ್ಕೆ ಸ್ಥಳೀಯ ಗ್ರಾಪಂ, ಅರಣ್ಯ ಇಲಾಖೆ, ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ಇವರೆಲ್ಲರ ಸಹಕಾರದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕಳೆದ 9 ತಿಂಗಳಿಂದ ಸುಮಾರು 4 ನೂರು ಸಸಿ ನೆಟ್ಟು ಪೋಷಿಸಲಾಗಿದೆ. ಈ ಗಿಡ-ಮರಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ನೆರಳಿನ ಆಶ್ರಯ ಕಲ್ಪಿಸಿವೆ. ಅಲ್ಲದೇ ಹಸಿರೇ ಉಸಿರು ತಂಡದಿಂದ ಸರ್ಕಾರದ ಖಾಲಿ ನಿವೇಶನದಲ್ಲಿ ಹಾಗೂ ಸಸಿ ನೆಡುವ ಆಸಕ್ತಿ ಇದ್ದವರ ಮನೆ ಮನೆಗೆ ಸುಮಾರು ಐದು ಸಾವಿರ ಸಸಿಗಳನ್ನು ಪೂರೈಸಿದ್ದಾರೆ. ಶರಣಪ್ಪ ಹಡಪದ ಎನ್ನುವ ವಯೋವೃದ್ಧ ನಿರಂತರ ಗಿಡಗಳ ಪೋಷಣೆಯಲ್ಲಿ ತೊಡಗಿ ಗ್ರಾಮದ ಮೇಲೆ ಹೊಂದಿರುವ ನಿಷ್ಠೆಯಿಂದ ಕಾಯಕ ಮಾಡುತ್ತಿದ್ದಾರೆ. ಈ ವೃದ್ಧನಿಗೆ ಹಸಿರೇ ಉಸಿರು ತಂಡದವರು ಮಾಸಿಕ 5 ಸಾವಿರ ರೂ. ಗೌರವಧನ ನೀಡುತ್ತಾರೆ. ಶರಣಪ್ಪ ಹಡಪದ ಅವರ ಕೆಲಸಕ್ಕೆ ಗ್ರಾಮಸ್ಥರು ಅಭೂತಪೂರ್ವ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಸಸಿಗಳ ಪೋಷಣೆಯಲ್ಲಿ ತೊಡಗಿದ ಶರಣಪ್ಪ ಹಡಪದ ಅವರನ್ನು ಗುತ್ತಿಗೆ ನೌಕರನ್ನಾಗಿ ಮುಂದುವರಿಸುವಂತೆ ಅರಣ್ಯ ಇಲಾಖೆಗೆ ತಂಡದವರು ಮನವಿ ಮಾಡಿಕೊಂಡಿದ್ದು, ಮನವಿಗೆ ಇಲಾಖೆಯವರು ಸ್ಪಂದಿಸುವ ನಿರೀಕ್ಷೆ ಹೊಂದಿದ್ದಾರೆ. ಹಸಿರೀಕರಣಕ್ಕೆ ಮುಂದಾಗಿರುವ ಯುವಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿಯೂ ಕೂಡ ಹಸಿರೇ ಉಸಿರು ತಂಡವರು ಪರಿಸರ ಸಂರಕ್ಷಣೆ ಮಾಡುವ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಸಸಿಗಳನ್ನು ಬೆಳೆಸಲು ನಿರೀಕ್ಷೆ ಹೊಂದಿದ್ದಾರೆ.

ಪರಿಸರ ಕಾಳಜಿಯಿಂದ ಇತರರಿಗೆ ಮುಧೋಳದ ಯುವಕರು ಮಾದರಿಯಾಗಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಯುವಕರು ಇಂತಹ ಸಮಾಜಮುಖೀ ಕಾರ್ಯ ಕೈಗೊಂಡಿದ್ದು ಶ್ಲಾಘನೀಯ. ತಂಡದ ಸದಸ್ಯರು ತಮ್ಮ ಕರ್ತವ್ಯದ ಬಿಡುವಿನ ಮಧ್ಯೆ ಇಂತಹ ಕೆಲಸ ಮಾಡಿದ್ದಾರೆ. ಯುವಕರು ಕುಟುಂಬದ ಜೊತೆಗೆ ಕೆಲ ಸಾಮಾಜಿಕ ಜವಬ್ದಾರಿಗಳನ್ನು ಹೊತ್ತುಕೊಳ್ಳಬೇಕು. ತಂದೆ,ತಾಯಿಗೆ ಉತ್ತಮ ಮಕ್ಕಳಗಾಗಬೇಕು. ಇತ್ತೀಚೆಗೆ ಯಲಬುರ್ಗಾ ತಾಲೂಕು ಹಸಿರಿಕರಣವಾಗುತ್ತಿರುವುದು ಸಂತಸ ತಂದಿದೆ. ಅರಣ್ಯ ಇಲಾಖೆಯ ಪರಿಶ್ರಮವು ಸಾಕಷ್ಟಿದೆ. –ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ              -ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next