Advertisement

ಸ್ವಾತಂತ್ರ್ಯಪೂರ್ವದಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಆರಂಭಗೊಂಡ ಉಳ್ಳಾಲ ಶಾಲೆ

09:39 AM Nov 22, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1830 ಶಾಲೆ ಆರಂಭ
ಹಿಂದೂ ಹೆಣ್ಮಕ್ಕಳ ಶಾಲೆಯೆಂದೇ ಪ್ರಸಿದ್ಧಿ

ಉಳ್ಳಾಲ: ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಉಳ್ಳಾಲದಲ್ಲಿ ಆರಂಭಗೊಂಡ ಹಿಂದೂ ಹೆಣ್ಮಕ್ಕಳ ಶಾಲೆಯೆಂದೇ ಪ್ರಸಿದ್ಧಿ ಪಡೆದಿದ್ದ ಜಿ.ಪಂ. ಸರಕಾರಿ ಪ್ರಾಥಮಿಕ ಶಾಲೆಯು 1830ರಲ್ಲಿ ಆರಂಭವಾಗಿ ಸುಮಾರು 190 ವರ್ಷಗಳೇ ಸಂದಿವೆ. ಉಳ್ಳಾಲದ ಪ್ರಥಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಹೆಗ್ಗಳಿಕೆ ಈ ಶಾಲೆಗಿದೆ.

ಉಳ್ಳಾಲ ದೇವಸ್ಥಾನ ರಸ್ತೆಯ ತಿರುಮಲ ತಥಾ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದ ಎದುರು ಭಾಗದಲ್ಲಿ ಸುಮಾರು 42 ಸೆಂಟ್ಸ್‌ ಜಾಗದಲ್ಲಿರುವ ಈ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ 5ನೇ ತರಗತಿವರೆಗೆ ಶಿಕ್ಷಣ ನಡೆಯುತ್ತಿದ್ದು, ಶತಮಾನಗಳಿಂದ ಐದೇ ತರಗತಿಗಳಿದ್ದರೂ, ಪ್ರಸ್ತುತ ಮೇಲ್ದರ್ಜೆಗೇರಿ 7ನೇ ತರಗತಿವರೆಗೆ ಶಿಕ್ಷಣಕ್ಕೆ ಅವಕಾಶವಿದೆ.

ಉಳ್ಳಾಲದ ಹಿರಿಯರಿಂದ ಆರಂಭವಾಗಿದ್ದ ಹಿಂದೂ ಹೆಣ್ಮಕ್ಕಳ ಶಾಲೆಯಲ್ಲಿ ಜಾತಿ, ಮತ-ಭೇಧ-ಭಾವವಿಲ್ಲದೇ ಶಿಕ್ಷಣ ನೀಡುತ್ತಿರುವುದು ವಿಶೇಷ. ಅನಂತರ ಬಾಸೆಲ್‌ ಮಿಷನ್‌ನ ಯುಬಿಎಂಸಿ ಶಾಲೆ ಆರಂಭದಿಂದಾಗಿ ಇಲ್ಲಿಯ ವಿದ್ಯಾರ್ಥಿಗಳು ಹಂಚಿಹೋಗಿದ್ದು, ಹಿಂದಿನಿಂದಲೂ ಈ ಶಾಲೆಯಲ್ಲಿ 100ರ ಒಳಗೆ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದರು.

Advertisement

ಹೆಣ್ಮಕ್ಕಳ ಶಾಲೆಯಾದರೂ ಹುಡುಗರಿಗೂ ಶಿಕ್ಷಣ ಆರಂಭದಲ್ಲಿ ಹೆಣ್ಮಕ್ಕಳ ಶಾಲೆಯಾಗಿದ್ದರೂ ಅನಂತರ ವಿದ್ಯಾರ್ಥಿಗಳ ಕೊರತೆ ನೀಗಿಸಲು ಗಂಡು ಮಕ್ಕಳಿಗೂ ಶಾಲೆಯಲ್ಲಿ ಪ್ರವೇಶಾತಿಗೆ ಅವಕಾಶ ನೀಡಲಾಯಿತು. ಶಾಲೆ ಆರಂಭವಾದ ಕೆಲವು ವರ್ಷಗಳ ಬಳಿಕ ಗಂಡು ಮಕ್ಕಳಿಗೂ ಅವಕಾಶವಿದ್ದರೂ ಕೂಡ ಸ್ವಾತಂತ್ರ್ಯ ಸಿಗುವವರೆಗೂ ಹೆಣ್ಮಕ್ಕಳ ಶಾಲೆ ಎಂದೇ ಪ್ರಸಿದ್ಧಿ ಪಡೆದಿತ್ತು. ಸ್ವಾತಂತ್ರ್ಯದ ಅನಂತರ ಮದ್ರಾಸ್‌ ಸರಕಾರದ ಆಡಳಿತ ಸಂದರ್ಭ ಈ ಶಾಲೆ ಸರಕಾರಿ ಶಾಲೆಯಾಗಿ ಮಾರ್ಪಾಡಾಯಿತು ಎನ್ನುತ್ತಾರೆ ಇಲ್ಲಿನ ಹಿರಿಯ ಹಳೆ ವಿದ್ಯಾರ್ಥಿ ರವೀಂದ್ರರಾಜ್‌ ಉಳ್ಳಾಲ್‌.

90 ವರ್ಷದ ಹಿಂದೆ 30 ಈಗ 13
90 ವರ್ಷದ ಹಿಂದೆ ಈ ಶಾಲೆಯಲ್ಲಿ ಒಟ್ಟು 30 ವಿದ್ಯಾರ್ಥಿಗಳಿದ್ದರು ಎನ್ನುತ್ತಾರೆ ಇಲ್ಲಿನ ಹಿರಿಯ ಹಳೆ ವಿದ್ಯಾರ್ಥಿ 91ರ ಹರೆಯದ ಉಳ್ಳಾಲ ನಿವಾಸಿ ರಮಾಬಾಯಿ ಅವರು. ನಾನು ಮತ್ತು ನನ್ನ ಐವರು ಸಹೋದರಿಯರು ಇದೇ ಶಾಲೆಯಲ್ಲಿ ಕಲಿತಿದ್ದು, ನಾವು ವಿದ್ಯಾರ್ಥಿಗಳಾಗಿದ್ದಾಗ ಚೆನ್ನಮ್ಮ , ಸೇಸಮ್ಮ, ಶಿವಮ್ಮ ಶಿಕ್ಷಕರು ನಮಗೆ ಪಾಠ ಮಾಡುತ್ತಿದ್ದರು. ಸುತ್ತಮುತ್ತ ಹೊಸ ಶಾಲೆಗಳ ನಿರ್ಮಾಣ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದ ಪ್ರಸ್ತುತ ಶಾಲೆಯಲ್ಲಿ ಒಬ್ಬರು ಖಾಯಂ ಶಿಕ್ಷಕರು ಮತ್ತು ಓರ್ವರು ಅತಿಥಿ ಶಿಕ್ಷಕರಿದ್ದು, 13 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ದರ್ಬಾರ್‌ ಬೀಡಿಯವರಿಂದ ಪೋಷಣೆ
ಈ ಹಿಂದೆ ದರ್ಬಾರ್‌ ಬೀಡಿಯ ಕಾರ್ಮಿಕರ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು. ಆ ಸಂದರ್ಭ ಬೀಡಿಯ ಗುತ್ತಿಗೆದಾರರು, ಕಾರ್ಮಿಕರು ಶಾಲೆಗೆ ದೇಣಿಗೆ ಸಂಗ್ರಹಿಸಿ ನೀಡುತ್ತಿದ್ದರು. 77 ವರ್ಷಗಳ ಹಿಂದೆ ಉಳ್ಳಾಲ ಶಾರದೋತ್ಸವ ಆರಂಭಗೊಂಡಿದ್ದೇ ಈ ಶಾಲೆಯಲ್ಲಿ. ಶಾರದಾ ವಿಸರ್ಜನೆ ಸಹಿತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಈ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ವಿದ್ಯಾರಣ್ಯ ಯುವಕ ಸಂಘ ಸ್ಥಾಪನೆಯಾಗಿದೆ. ಅತ್ತಾವರ ಎಲ್ಲಪ್ಪ, ಶ್ರೀನಿವಾಸ ಮಲ್ಯ ಶಾಲೆಯ ಒಡನಾಟ ಸುಭಾಷ್‌ಚಂದ್ರ ಬೋಸ್‌ ಅವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಅತ್ತಾವರ ಎಲ್ಲಪ್ಪ ಮತ್ತು ನವ ಮಂಗಳೂರಿನ ನಿರ್ಮಾತೃ ಶ್ರೀನಿವಾಸ ಮಲ್ಯ ಅವರ ಬಾಲ್ಯ ಕಾಲ ಉಳ್ಳಾಲದಲ್ಲೇ ಆಗಿದ್ದು, ಈ ಶಾಲೆಯಲ್ಲಿ ಬಾಲಪಾಠವನ್ನು ಪಡೆದಿದ್ದರು ಎನ್ನುವ ಮಾಹಿತಿ ಇದೆ. ಆದರೆ ದಾಖಲೆಗಳು ಇಲ್ಲ. ಮಾಜಿ ಶಾಸಕ ಇದಿನಬ್ಬ ಅವರು ಇಲ್ಲಿನ ಹಳೆ ವಿದ್ಯಾರ್ಥಿಯಾಗಿದ್ದರು.

ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಪಣ
ಶತಮಾನಗಳ ಇತಿಹಾಸವಿರುವ ಈ ಶಾಲೆಯ ಅಭಿವೃದ್ಧಿಗೆ 1.5 ಕೋ.ರೂ. ವೆಚ್ಚದಲ್ಲಿ ಶಾಲಾ ಕಟ್ಟಡ, ವೇದಿಕೆ ನಿರ್ಮಾಣಕ್ಕೆ ಹಳೆ ವಿದ್ಯಾರ್ಥಿ ಸಂಘ ವತಿಯಿಂದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಶಾಲೆಯ ಅಭಿವೃದ್ಧಿ ಸಮಿತಿಯಿಂದ ನೂತನ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಸರ್ವರ ಸಹಕಾರವನ್ನು ಕೂಡ ಕೋರಲಾಗಿದೆ.

ಶಾಲೆ ಉಳಿ ಸಲು ಶಾಲಾ ಹಳೆ ವಿದ್ಯಾರ್ಥಿ ಸಂಘ ಹಗಲಿರುಳು ಶ್ರಮಿಸುತ್ತಿದೆ. ಸ್ಥಳೀಯ 4 ವಿದ್ಯಾರ್ಥಿಗಳು ಈ ಶಾಲೆಯ ವ್ಯಾಸಂಗ ನಡೆಸುತ್ತಿದ್ದು ಉಳಿದವ ರ‌ನ್ನು ಹಳೆ ವಿದ್ಯಾರ್ಥಿಗಳು ವಾಹನದ ವ್ಯವಸ್ಥೆ ಮಾಡಿ ಕರೆ ತರುತ್ತಿದ್ದಾರೆ.
-ಪುಷ್ಪಾವತಿ,ಮುಖ್ಯ ಶಿಕ್ಷಕಿ (ಪ್ರಭಾರಿ)

ಉಳ್ಳಾಲ ಶಾಲೆಯಲ್ಲಿ ಮನೆಯ ವಾತಾವರಣವಿತ್ತು. ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ದಿ| ವಿಟuಲ್‌ ಭಟ್‌ ಅವರ ಹೆಸರಿನಲ್ಲಿ ಒಂದು ಕೊಠಡಿ ನಿರ್ಮಾಣಕ್ಕೆ ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್‌ನಿಂದ 5 ಲಕ್ಷ ರೂ. ಧನ ವಿನಿಯೋಗಿಸಲಿದೆ.
-ಉದಯಶಂಕರ್‌ ಅನಂತರಾವ್‌ ಉಳ್ಳಾಲ, ಶಾಲಾ ಹಿರಿಯ ಹಳೆ ವಿದ್ಯಾರ್ಥಿ

- ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next