Advertisement

ಶಾಲೆ ದಾಖಲಾತಿ ಶೂನ್ಯವಾದರೆ ವರ್ಗಾವಣೆ ಶಿಕ್ಷೆ

02:36 AM May 14, 2019 | Sriram |

ಬೆಂಗಳೂರು : ಶೂನ್ಯ ದಾಖಲಾತಿಯ ಸರ್ಕಾರಿ ಶಾಲಾ -ಕಾಲೇಜಿನ ಶಿಕ್ಷಕ, ಉಪನ್ಯಾಸಕರು ಶೈಕ್ಷಣಿಕ ವರ್ಷದ ಆರಂಭದಲ್ಲೇ ‘ವರ್ಗಾವಣೆ ಶಿಕ್ಷೆ’ಗೆ ಒಳಗಾಗಬೇಕಾದ ಆತಂಕ ಎದುರಾಗಿದೆ.

Advertisement

ಸರ್ಕಾರಿ ಶಾಲಾ ಕಾಲೇಜುಗಳ ದಾಖಲಾತಿ ಹೆಚ್ಚಿಸಲು ವಿಭಿನ್ನ ಪ್ರಯತ್ನಗಳು ನಡೆಯುತ್ತಿದೆ. ದಾಖಲಾತಿ ಅಭಿಯಾನವು ಜಿಲ್ಲಾ, ತಾಲೂಕು ಮಟ್ಟದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇಷ್ಟಾದರೂ, ಸರ್ಕಾರಿ ಶಾಲಾ ಕಾಲೇಜಿನಲ್ಲಿ ಕನಿಷ್ಠ ದಾಖಲಾತಿ ಸಾಧಿಸಲು ಸಾಧ್ಯವಾಗದಿದ್ದರೆ ಅಂತಹ ಶಾಲಾ, ಕಾಲೇಜಿನ ಶಿಕ್ಷಕ, ಉಪನ್ಯಾಸಕರು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

ಶಿಕ್ಷಕ, ಉಪನ್ಯಾಸಕರ ಎಲ್ಲ ವಿವರ ಆನ್‌ಲೈನ್‌ ಮೂಲಕ ಪಡೆಯಲಾಗುತಿತ್ತು. ದಾಖಲಾತಿ ಶೂನ್ಯವಾಗಿರುವುದು ಕಂಡು ಬಂದ ಕ್ಷಣವೇ ಆ ಶಾಲಾ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಲಾಗುತ್ತದೆ. ಈವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಜಿಲ್ಲಾ ಉಪನಿರ್ದೇಶ‌ಕರು ಇಂತಹ ಶಿಕ್ಷಕರಿಗೆ ಶ್ರೀರಕ್ಷೆಯಾಗಿ ನಿಲ್ಲುತ್ತಿದ್ದರು. ಇನ್ನು ಮುಂದೆ ಅದು ಅಸಾಧ್ಯ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಹಾಗೆಯೇ ನಗರ, ಗ್ರಾಮಾಂತರ ಪ್ರದೇಶದ ಕೆಲವು ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ತಾವು ರಕ್ಷಿಸಿಕೊಳ್ಳಲು ಬೇರೆ ಶಾಲೆಯ ಮಕ್ಕಳನ್ನು ಎರವಲು ಪಡೆದು ಶಿಕ್ಷಣ ನೀಡುತ್ತಿರುವ ನಿದರ್ಶನಗಳು ಕೂಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂದಿದೆ.

ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತದೆ. ಆದರೆ, ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಿಕ್ಷಕರು ನಿರೀಕ್ಷಿತ ಪ್ರಮಾಣದಲ್ಲಿ ಶ್ರಮಪಡುತ್ತಿಲ್ಲ ಎಂಬ ಆರೋಪವು ಇದೆ. ಹೀಗಾಗಿ 2019-20ನೇ ಸಾಲಿನಲ್ಲಿ ಶೂನ್ಯ ದಾಖಲಾತಿ ಶಾಲೆಗಳ ಶಿಕ್ಷಕರಿಗೆ ಶೈಕ್ಷಣಿಕ ವರ್ಗದ ಮಧ್ಯಭಾಗದಲ್ಲಿ ನಿಯೋಜನೆ ಅಥವಾ ವರ್ಗಾವಣೆ ಶಿಕ್ಷೆ ನೀಡಲು ಸರ್ಕಾರ ಮುಂದಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆಯ ಅನುಪಾತಕ್ಕಿಂತ ಶಿಕ್ಷಕ ಸಂಖ್ಯೆ ಹೆಚ್ಚಿದ್ದು, ಕಾರ್ಯಭಾರ ಇಲ್ಲದೇ ಸಂಬಳ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾಹಿತಿ ಬಂದಿದೆ. ಹಾಗೆಯೇ ಕಳೆದ ಬಾರಿ ಶೂನ್ಯ ದಾಖಲಾತಿ ಪಡೆದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಸಂಗ್ರಹಿಸುತ್ತಿದೆ. ಕೆಲವೊಂದು ಸರ್ಕಾರಿ ಕಾಲೇಜುಗಳ ಕೆಲವು ಕಾಂಬಿನೇಷನ್‌ನಲ್ಲಿ ವಿದ್ಯಾರ್ಥಿಗಳು ಇಲ್ಲದೇ ಇದ್ದರೂ ಕಾರ್ಯಭಾರ ನಡೆಸದೇ ವೇತನ ಪಡೆಯುತ್ತಿರುವುದು ಕಂಡಬಂದಿದೆ. ಹೀಗಾಗಿ ಕಾರ್ಯಭಾರ ಇಲ್ಲದ ಶಿಕ್ಷಕ, ಉಪನ್ಯಾಸಕರ ಮಾಹಿತಿಯನ್ನು ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಪಡೆಯಲು ಎರಡು ಇಲಾಖೆಗಳು ಸಜ್ಜಾಗಿರುವುದು ತಿಳಿದುಬಂದಿದೆ.

ಶಾಲಾ ಕಾಲೇಜಿನಲ್ಲಿ ಶೂನ್ಯ ದಾಖಲಾತಿಯಾಗಿದ್ದು ಶಿಕ್ಷಕರು ಹೆಚ್ಚಿನ ಸಂಖ್ಯೆ ಯಲ್ಲಿದ್ದು ಅಥವಾ ಕಾಲೇಜುಗಳ ವಿವಿಧ ಕಾಂಬಿನೇಷನ್‌ನಲ್ಲಿ ವಿದ್ಯಾರ್ಥಿಗಳು ಇಲ್ಲದ ಕಡೆಗಳಲ್ಲಿ ಉಪನ್ಯಾಸಕರು ಮಾತ್ರ ಇದ್ದಲ್ಲಿ. ಅಂತಹ ಶಿಕ್ಷಕ ಉಪ ನ್ಯಾಸಕರನ್ನು ನಿಯೋಜನೆಯ ಮೇಲೆ ಜಿಲ್ಲೆಯ ಬೇರೆ ಬೇರೆ ಜಾಗಕ್ಕೆ ಕಳುಹಿಸಿಕೊಡಲಾಗುತ್ತದೆ. ಇದರ ಸಂಪೂರ್ಣ ಉಸ್ತುವಾರಿಯನ್ನು ಎರಡು ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಿಕೊಡಲಾಗಿದೆ. ನಿಯೋಜನೆ ಮೇಲಿರುವ ಅಥವಾ ಶಾಲಾ, ಕಾಲೇಜಿ ನಲ್ಲಿ ಹೆಚ್ಚುವರಿಯಾಗಿರುವ ಶಿಕ್ಷಕ, ಉಪನ್ಯಾಸಕರು ಇಷ್ಟವಿಲ್ಲದಿದ್ದರೂ ಕಡ್ಡಾಯವಾಗಿ ವರ್ಗಾವಣೆ ಪಡೆಯಬೇಕಾದ ಸ್ಥಿತಿ ಕೂಡ ಬರಹುದು ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆನ್‌ಲೈನ್‌ನಲ್ಲೇ ಅಪ್‌ಡೇಟ್: ಶಿಕ್ಷಕರು ಸೇವಾವಿವರ, ವೈಯಕ್ತಿಕ ವಿವರ, ಕಾರ್ಯಭಾರ ಸಹಿತವಾಗಿ ಎಲ್ಲ ಮಾಹಿತಿಯನ್ನು ಆನ್‌ಲೈನ್‌ ಮೂಲಕವೇ ಅಪ್‌ಡೇಟ್ ಮಾಡಬೇಕು. ಶೈಕ್ಷಣಿಕ ವಿಚಾರವಾಗಿ ಶಿಕ್ಷಣ ಇಲಾಖೆಯಿಂದ ಕೋರಿದ್ದ ಹೆಚ್ಚುವರಿ ಮಾಹಿತಿಯನ್ನು ಸರ್ಕಾರಿ ಪ್ರಾಥಮಿಕ ಶಾಲೆಯ 1,64,909 ಶಿಕ್ಷಕರಲ್ಲಿ 96,284 ಶಿಕ್ಷಕರು ನೀಡಿರಲಿಲ್ಲ. ಪ್ರೌಢಶಾಲೆಯ 40,704 ಶಿಕ್ಷಕರಲ್ಲಿ 11,186 ಶಿಕ್ಷಕರು ಹೆಚ್ಚುವರಿ ಮಾಹಿತಿ ನೀಡಿರಲಿಲ್ಲ. ಸರ್ಕಾರಿ ಅನು ದಾನಿತ ಪ್ರಾಥಮಿಕ ಶಾಲೆಯ 14,718 ಶಿಕ್ಷಕರಲ್ಲಿ 9,345 ಶಿಕ್ಷಕರು ಹಾಗೂ ಪ್ರೌಢ ಶಾಲೆಯ 26,786 ಶಿಕ್ಷಕರಲ್ಲಿ 14,071 ಶಿಕ್ಷಕರು ಹೆಚ್ಚುವರಿ ಮಾಹಿತಿ ನೀಡಿ ರಲಿಲ್ಲ. ಮೇ.10ರವರೆಗೂ ಕಾಲಾವಕಾಶ ನೀಡಲಾಗಿತ್ತು. ನಿರ್ದಿಷ್ಟ ಅವಧಿಯೊಳಗೆ ಕೆಲವು ಶಿಕ್ಷಕರು ಹೆಚ್ಚುವರಿ ಮಾಹಿತಿ ನೀಡಿದ್ದಾರೆ. ಆದರೆ, ಹಲವು ಜಿಲ್ಲೆಯ ಅನೇಕ ಶಿಕ್ಷಕರು ಹೆಚ್ಚುವರಿ ಮಾಹಿತಿ ಅಪ್‌ಲೋಡ್‌ ಮಾಡಿಲ್ಲ. ಇದರಿಂದ ವರ್ಗಾವಣೆ ಪ್ರಕ್ರಿಯೆಗೆ ಸಮಸ್ಯೆಯಾಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ಕಳೆದ ಬಾರಿ ಶೂನ್ಯ ದಾಖಲಾತಿ ಪಡೆದ ಕಾಲೇಜಿನ ಉಪನ್ಯಾಸಕರ ಕಾರ್ಯಭಾರದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. 2019-20ನೇ ಸಾಲಿನ ದಾಖಲಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಶೂನ್ಯ ದಾಖಲಾತಿ ಮಾಹಿತಿ ಇನ್ನು ಲಭ್ಯವಿಲ್ಲ. ಶೂನ್ಯದಾಖಲಾತಿ ಕಾಲೇಜಿನ ಉಪನ್ಯಾಸಕರನ್ನು ತಕ್ಷಣವೇ ಬೇರೆ ಕಾಲೇಜಿಗೆ ನಿಯೋಜನೆ ಮಾಡಲಾಗುತ್ತದೆ.
– ಸಿ.ಶಿಖಾ, ನಿರ್ದೇಶಕಿ, ಪದವಿಪೂರ್ವ ಶಿಕ್ಷಣ ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next