Advertisement

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಶಾಲಾ ಜಾಗ ವಿವಾದ

05:12 PM Sep 18, 2018 | |

ಕಡೂರು: ಖಾಸಗಿ ಶಾಲೆಯ ಜಾಗದ ವಿಷಯದಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ನಡೆದಿದೆ.

Advertisement

ತಾಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ಆದಿಶಕ್ತಿ ವಿದ್ಯಾಸಂಸ್ಥೆ ಅಡಿಯಲ್ಲಿ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯನ್ನು ಕಳೆದ 28 ವರ್ಷದಿಂದ ನಡೆಸಿಕೊಂಡು ಬರಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಶಾಲೆಯನ್ನು ಮುಚ್ಚುವ ತೀರ್ಮಾನ ಕೈಗೊಳ್ಳಲಾಗಿದೆ. 

ಸರ್ವೆ ನಂ. 261/4 ರಲ್ಲಿ 1 ಎಕರೆ 10 ಗುಂಟೆ ಜಾಗವನ್ನು ಕಡಿಮೆ ದರದಲ್ಲಿ 28 ವರ್ಷದ ಹಿಂದೆ ಮರಿಯಮ್ಮ ಎಂಬುವವರು ವ್ಯಕ್ತಿಯೊಬ್ಬರಿಂದ ಖರೀದಿಸಿ ಅದನ್ನು ಖಾಸಗಿ ಶಾಲೆಗೆ ಬಾಡಿಗೆ ಆಧಾರದ ಮೇಲೆ ನೀಡಿದ್ದರು ಎಂದು ಹೇಳಲಾಗಿದೆ. ಈಗ ಶಾಲೆ ಮುಚ್ಚುವ ಹಿನ್ನೆಲೆಯಲ್ಲಿ ಸದರಿ ಜಾಗವನ್ನು ಮಾರಾಟ ಮಾಡಲು ಮರಿಯಮ್ಮ ಹೊರಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯತ್‌ ಸದಸ್ಯ ಎಂ. ಪ್ರಕಾಶ್‌ನಾಯ್ಕ ನೇತೃತ್ವದಲ್ಲಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಗೆ ಇಳಿದರು.
 
ಸೋಮವಾರ ಸದರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ನೋಂದಣಿ ಮಾಡಲು ತಾಲೂಕು ಕಚೇರಿ ಆವರಣದಲ್ಲಿರುವ ಉಪನೊಂದಣಾಧಿಕಾರಿ ಕಚೇರಿಗೆ ಬಂದಾಗ ಅಲ್ಲಿ ಗ್ರಾಮಸ್ಥರು ಮತ್ತು ನೇತೃತ್ವ ವಹಿಸಿದ್ದ ಎಂ. ಪ್ರಕಾಶ್‌ ನಾಯ್ಕ ನೋಂದಣಿ ಮಾಡದಂತೆ ಒತ್ತಾಯಿಸಿ ಆ ಜಾಗವನ್ನು ಗ್ರಾಮಕ್ಕೆ ವಾಪಾಸು ನೀಡಲು ಪಟ್ಟು ಹಿಡಿದು ಕುಳಿತರು.

ಈ ಹಂತದಲ್ಲಿ ಎರಡೂ ಗುಂಪಿನ ನಡುವೆ ವಾಗ್ವಾದ ನಡೆದು ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಸದರಿ ಜಾಗವನ್ನು ಆಡಳಿತ ಮಂಡಳಿಯಿಂದ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿಸುವ ಪ್ರಕ್ರಿಯೆಗೆ ಮುಂದಾಗಿದ್ದ ಮಧ್ಯವರ್ತಿಯ ಮೇಲೂ ಕೈ ಮಾಡಿದ ಘಟನೆ ನಡೆದು ಕೆಲವು ಕಾಲ ತಾಲೂಕು ಕಚೇರಿ ಆವರಣ ಬಿಗುವಿನಿಂದ ಕೂಡಿತು.

ಅಂತಿಮವಾಗಿ ಪ್ರಕರಣ ಕಡೂರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಅಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಗ್ರಾಮದ ಜನರೇ ಬಗೆಹರಿಸಿಕೊಂಡು ಬರುವಂತೆ ಸೂಚಿಸಲಾಗಿದೆ. ಸದರಿ ಖಾಸಗಿ ಶಾಲೆಯ ಜಾಗದಲ್ಲಿ ಸಾರ್ವಜನಿಕ ಶಿಕ್ಷಣ
ಇಲಾಖೆಯು ಅಕ್ಷರದಾಸೋಹ ಕೊಠಡಿ ನಿರ್ಮಿಸಿರುವುದು ಘಟನೆಯ ಇನ್ನಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ.

Advertisement

ತಾ.ಪಂ.ಸದಸ್ಯ ಆನಂದ ನಾಯ್ಕ, ಸೇವ್ಯಾನಾಯ್ಕ, ಬಸವರಾಜನಾಯುಕ, ಸೋಮಶೇಖರ್‌, ಕೃಷ್ಣನಾಯ್ಕ, ಹನುಮಂತಪ್ಪ, ಶ್ರೀಕಂಠಪ್ಪ, ಲಕ್ಷ್ಮೀನಾರಾಯಣ ಇದ್ದರು. 

ಶಾಲೆಯ ಜಾಗವನ್ನು 28 ವರ್ಷದ ಹಿಂದೆ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿತ್ತು. ಇದೀಗ ಗ್ರಾಮದಲ್ಲಿ ವಿವಿಧ ಕಚೇರಿ, ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ ಮುಂತಾದ ಅಭಿವೃದ್ಧಿ ಕೆಲಸಕ್ಕೆ ಜಾಗದ ಅವಶ್ಯಕತೆಯಿದ್ದು, ಶಾಲೆಯ ಜಾಗವನ್ನು ಗ್ರಾಮ ಪಂಚಾಯತ್‌ಗೆ ಇಂದಿನ ಮಾರುಕಟ್ಟೆ ದರದಂತೆ ನೀಡಬೇಕು. 
 ಪ್ರಕಾಶ್‌ ನಾಯ್ಕ , ಗ್ರಾ.ಪಂ. ಸದಸ್ಯ

ಶಾಲೆಯನ್ನು ಮುಚ್ಚಿರುವುದರಿಂದ ಆ ಜಾಗವನ್ನು ಮಾರಾಟ ಮಾಡಲು ನಮಗೆ ಎಲ್ಲ ರೀತಿಯ ಹಕ್ಕು ಇದೆ. ಇದಕ್ಕಾಗಿ
ಆ ಜಾಗವನ್ನು ಮಾರಾಟ ಮಾಡಲು ಮುಂದಾಗಿದ್ದೇನೆ. ಈಗ ಗ್ರಾಮದ ಜನರು ಪ್ರತಿಭಟನೆ ಮಾಡುತ್ತಿರುವುದರಿಂದ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ.
 ಮರಿಯಮ್ಮ , ಜಾಗದ ಮಾಲೀಕರು

Advertisement

Udayavani is now on Telegram. Click here to join our channel and stay updated with the latest news.

Next