Advertisement

ಇಂದಿನಿಂದ ಶಾಲಾ-ಕಾಲೇಜು ಆರಂಭ: ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಗುರುಗಳು

08:40 AM Jan 01, 2021 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಶುಕ್ರವಾರ ಗ್ರಾಮೀಣ ಪ್ರದೇಶಗಳಲ್ಲೂ ಶಾಲಾ-ಕಾಲೇಜು ಆರಂಭವಾಗಲಿದ್ದು ಸಂಭ್ರಮ ಮನೆಮಾಡಿದೆ. ಶಾಲೆಗಳನ್ನು ತಳಿರುತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಶಾಲಾ-ಕಾಲೇಜು ಆರಂಭದ ಹಿನ್ನೆಲೆ ಗುರುವಾರ ಬಸವನಗುಡಿಯ ಬಿಎಂಎಸ್‌, ಜಯ ನಗರದ ಎನ್‌ ಎಂಕೆಆರ್‌ ವಿ, ಬಿಇಎಸ್‌, ಆರ್‌.ವಿ. ನ್ಯಾಷನಲ್‌ ಕಾಲೇಜು, ವಿಜಯ ಕಾಲೇಜಿಗೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ಮಾರ್ಗಸೂಚಿ ಪಾಲನೆ, ಶಾಲೆಗಳ ಸ್ವತ್ಛತೆ ಸಂಬಂಧಿಸಿ ದಂತೆ ಶಿಕ್ಷಕರಿಂದ ಪೂರಕ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಸುರೇಶ್‌ಕುಮಾರ್‌, ಎಸ್ಸೆಸ್ಸೆಲ್ಸಿ ಮತ್ತು ಪಿಯು ತರಗತಿಗಳ ಪ್ರಾರಂಭದ ಬಗ್ಗೆ ಈಗಾಗಲೇ ಶಾಲಾ ಆಡಳಿತ ಮಂಡಳಿಗೆ ಮಾರ್ಗದರ್ಶಿ ಸೂತ್ರ ಕಳುಹಿಸಿಕೊಡಲಾಗಿದೆ.

ಯಾವುದೇ ಕಾರಣಕ್ಕೂ ಶಾಲಾ-ಕಾಲೇಜು ಆವರಣಗಳಲ್ಲಿ ಮಕ್ಕಳು ಗುಂಪುಗಟ್ಟದಂತೆ ನೋಡಿಕೊಳ್ಳುವಂತೆ ಶಿಕ್ಷಕರಿಗೂ ಸೂಚನೆ ನೀಡಲಾಗಿದೆ ಎಂದರು. ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಪೋಷಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಮಕ್ಕಳನ್ನು ತಮ್ಮ ಮಕ್ಕಳ ರೀತಿಯಲ್ಲಿ ಶಿಕ್ಷಕರು ನೋಡಿಕೊಳ್ಳಲಿದ್ದಾರೆ. ಎಸ್‌ಡಿಎಂಸಿ ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದರು. ತರಗತಿ ಆರಂಭದ ಹಿನ್ನೆಲೆ ಪ್ರತಿ ಜಿಲ್ಲೆಗಳಿಗೂ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕಳುಹಿಸಿಕೊಡಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ಪ್ರತಿ ಜಿಲ್ಲೆಯಿಂದ ಬರುತ್ತಿದೆ. ಈಗಾಗಲೇ ಶಾಲಾ-ಕಾಲೇಜು ಬಿಟ್ಟು ಹಲವು ವಲಯಗಳ ಚಟುವಟಿಕೆ ಆರಂಭವಾಗಿವೆ.ಆದರೆ, ಶಾಲೆಗಳು ಆರಂಭವಾಗಿರಲಿಲ್ಲ. ಇತರ ವಲಯದಂತೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.

ನಮ್ಮ ಮಕ್ಕಳ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಕ್ಕಳ ಶಿಕ್ಷಣವೂ ಮುಖ್ಯ. ಮಕ್ಕಳು ಶಾಲಾ ಕಾಲೇಜುಗಳಿಗೆ ಬಂದರೆ ಅವರ ಸ್ನೇಹಿತರೊಂದಿಗೆ ಬೆರೆತು ಆಸಕ್ತಿಯಿಂದ ಪಾಠಕಲಿಯುತ್ತಾರೆ. ಆದರೆ ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

2ನೇ ಅಲೆ ಬಗ್ಗೆ ಆತಂಕ ಬೇಡ: 2ನೇ ಅಲೆ ಬಗ್ಗೆ ಪೋಷಕರು ಆತಂಕ ಪಟ್ಟಿದ್ದಾರೆ. ಆದರೆ, ಈ ಅಲೆ ಕೋವಿಡ್ ನಷ್ಟು ಅಪಾಯಕಾರಿ ಅಲ್ಲ ಎಂದು ತಜ್ಞರು ಎಂದು ಹೇಳುತ್ತಿದ್ದಾರೆ. ಶುಕ್ರವಾರ ಆನೇಕಲ್‌, ಹೊಸೂರು, ಸರ್ಜಾಪುರ ಭಾಗಗಳಿಗೆ  ಭೇಟಿ ನೀಡಲಿದ್ದು ಶನಿವಾರ ಚಿಕ್ಕಬಳ್ಳಾಪುರದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸುರೇಶ್‌ಕುಮಾರ್‌ ಹೇಳಿದರು

Advertisement

ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗೆ ಆತಂಕ ಬೇಡ

ಒಂದು ವಾರದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟಿಸಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳು ಮಾರ್ಚ್‌ನಲ್ಲಿಯೇ ಅಂತಿಮ ಪರೀಕ್ಷೆ ನಡೆಯುತ್ತವೆ ಎಂದು ಭಯ ಪಡುವುದು ಬೇಡ ಎಂದು ಸಚಿವ ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ನೂತನ ಕ್ಯಾಲೆಂಡರ್‌ ಹಾಗೂ ಡೇರಿ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ವರ್ಷದ ಪಠ್ಯ ಕ್ರಮದ ಬಗ್ಗೆ ಯಾವುದೇ ಗೊಂದಲ ಇಲ್ಲ. ಶುಕ್ರವಾರದಿಂದ ತರಗತಿ ಆರಂಭವಾದರೂ ದಿನಕ್ಕೆ 4 ಕ್ಲಾಸ್‌ ಮಾತ್ರ ನಡೆಯುತ್ತವೆ. ಪರೀಕ್ಷೆಗೆ ಅಗತ್ಯವಿರುವಷ್ಟು ಪಠ್ಯ ಕಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಮಾರ್ಚ್‌ನಲ್ಲಿ ಪರೀಕ್ಷೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಆತಂಕಕ್ಕೆ ಒಳಗಾಗದೇ ಅಧ್ಯಯನ ಮಾಡಬೇಕೆಂದರು.

ಶಾಲಾ ಮಕ್ಕಳ ಫೀ ಕುರಿತಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಂಘಟನೆಗಳ ಜತೆ ಮಾತನಾಡಿದ್ದೇನೆ. ಕ್ಯಾಮ್ಸ್ ನವರು ಪಾಲಕರಿಗೆ ತೊಂದರೆಯಾಗದ ರೀತಿಯಲ್ಲಿ ಶುಲ್ಕ ಪ್ರಮಾಣ ನಿಗದಿ ಮಾಡುವುದಾಗಿ ತಿಳಿಸಿದ್ದಾರೆ. ಶೀಘ್ರ ಪಾಲಕರು ಮತ್ತು ಖಾಸಗಿ ಶಾಲೆ ಆಡಳಿತ ಮಂಡಳಿಗಳ ಜತೆ ಜಂಟಿ ಸಭೆ ನಡೆಸಿ ಪರಿಹಾರ ಒದಗಿಸಲಾಗುವುದೆಂದರು. ಹೆಚ್ಚಿನ ಶುಲ್ಕ ಪಡೆಯುವ ಶಾಲೆಗಳ ಲೈಸೆನ್ಸ್‌ ರದ್ದು ಕುರಿತಾದ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಲಾಗುವುದು. ಇನ್ನು ಶಾಲೆ ಆರಂಭದ ಬಗ್ಗೆ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಜ.1 ರಿಂದ ಶಾಲೆ ತೆರೆಯುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಬೇರೆ ಯಾವುದೇ ಚರ್ಚೆ ಅನಗತ್ಯ ಎಂದರು.

ಇದನ್ನೂ ಓದಿ: ಹೊಸ ವರ್ಷದ ಶುಭಾಶಯಗಳು: ವರ್ಷಾರಂಭದದಲ್ಲಿ ನಿಮ್ಮ ದಿನಭವಿಷ್ಯ ಹೇಗಿದೆ ?

Advertisement

Udayavani is now on Telegram. Click here to join our channel and stay updated with the latest news.

Next