Advertisement

ನ್ಯೂಯಾರ್ಕ್‌: ಸದ್ಯಕ್ಕೆ ಶಾಲೆ, ಕಾಲೇಜು ತೆರೆಯುವುದಿಲ್ಲ

05:48 PM May 04, 2020 | sudhir |

ನ್ಯೂಯಾರ್ಕ್‌: ಕೋವಿಡ್‌-19ನಿಂದ ಕಂಗೆಟ್ಟಿರುವ ವಿಶ್ವದ ದೊಡ್ಡಣ್ಣ ಅಮೆರಿಕದ ರಾಜ್ಯಗಳು ಜೀವ ಕೈಯಲ್ಲಿಟ್ಟುಕೊಂಡು ಹೋರಾಡುತ್ತಿವೆ. ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ನ್ಯೂಯಾರ್ಕ್‌ ಕೂಡಾ ಸೋಂಕು ಹರಡದಂತೆ ತಡೆಯಲು ಪ್ರತಿನಿತ್ಯ ಒಂದಲ್ಲ ಒಂದು ನಿಯಮ ಜಾರಿ ಮಾಡುತ್ತಲೇ ಇದೆ. ಇದೀಗ ಈ ರಾಜ್ಯದಿಂದ ಮತ್ತೂಂದು ವಿಷಯ ಹೊರಬಿದ್ದಿದ್ದು, ರಾಜ್ಯದಲ್ಲಿ ಶೈಕ್ಷಣಿಕ ವರ್ಷದ ಉಳಿದ ದಿನಗಳಲ್ಲೂ ಶಾಲೆಗಳನ್ನು ಮುಚ್ಚಲು ಸ್ಥಳೀಯ ಸರಕಾರ ನಿರ್ಧರಿಸಿದೆ ಎಂದು ಗವರ್ನರ್‌ ಆಂಡ್ರ್ಯೂ ಕ್ಯುಮೊ ಅಧಿಕೃತ ಘೋಷಣೆ ಮಾಡಿದ್ದಾರೆ.

Advertisement

ಸುಮಾರು 4.2 ದಶಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿರುವ ರಾಜ್ಯ ಸೋಂಕು ನಿಯಂತ್ರಣಕ್ಕಾಗಿ ಶಾಲೆ-ಕಾಲೇಜುಗಳಿಗೆ ಮಾ.18 ರಿಂದ ಅನಿರ್ದಿಷ್ಟಾವಧಿ ರಜೆ ಘೋಷಿಸಿತ್ತು. ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವುದು ಸುರಕ್ಷಿತವಲ್ಲ ಎಂಬ ಅಭಿಪ್ರಾಯವನ್ನು ಹೊರಹಾಕಿರುವ ಸರಕಾರ, ಶೈಕ್ಷಣಿಕ ವರ್ಷವಿಡೀ ಶಾಲಾ-ಕಾಲೇಜುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಮಾಸ್ಕ್ ಧರಿಸಿ ಶಾಲೆಗೆ ಬರುವ ಅನಿವಾರ್ಯತೆ ಇದೆ. ಸಾಮೂಹಿಕ ಪ್ರಾರ್ಥನೆ, ಆಟ-ಪಾಠಕ್ಕೆ ಅವಕಾಶವಿಲ್ಲದ ವಾತಾವರಣ ಇದೆ. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕ ಸಾರಿಗೆ ಕಾರ್ಯಾಚರಿಸಬೇಕಿದೆ. ಹೀಗಿರುವಾಗ ಉಳಿದಿರುವ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಆಟ, ಪಾಠಗಳನ್ನು ಹೇಗೆ ತಾನೆ ವ್ಯವಸ್ಥೆಗೊಳಿಸಲು ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ಈ ನಿಟ್ಟಿನಲ್ಲಿ ಮೇ ಕೊನೆಯ ವಾರದಲ್ಲಿ ಬೇಸಗೆೆ ರಜಾವಧಿಯ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next