ಪಾಂ… ಪಾಂ… ಹಾರನ್ನು. ಮನೆಯ ಗೇಟ್‌ನ ಎದುರು ಸ್ಕೂಲ್ ಬಸ್ಸು. ಅದನ್ನು ನೋಡಿ, ಬ್ಯಾಗ್ ಏರಿಸಿ ಹೊರಟ ಪುಟಾಣಿಯ ಮೊಗದಲ್ಲಿ ಮೊಗೆದಷ್ಟೂ ಖುಷಿ. ಡ್ರೈವರ್‌ಗೆ ನಮಸ್ಕಾರ ಹೇಳಿಯೇ, ಆ ಪುಟಾಣಿ ಬಸೊಳಗೆ ಕಾಲಿಡುತ್ತೆ! ಡ್ರೈವರ್ ಎಂದರೆ, ಅದಕ್ಕೆ ಅಷ್ಟು ಪ್ರೀತಿ, ಭಯ, ಭಕ್ತಿ. ಏಕೆ ಗೊತ್ತಾ? ಒಂದು ತಾಸಿನ ನಂತರ ಆ ಡ್ರೈವರೇ ಈ ಮಕ್ಕಳಿಗೆ ಟೀಚರ್! ಮೈದಾನದಲ್ಲಿ ಆಟ ಆಡಿಸುವ, ಬೋರ್ಡಿನ ಮುಂದೆ ನಿಂತು ಗಣಿತ ಸೂತ್ರ ಹೇಳಿಕೊಡುವ ಮಾರ್ಗದರ್ಶಕ.
ಅವರು ರಾಜಾರಾಮ್ ಮೇಷ್ಟ್ರು! ಉಡುಪಿಯ ಬ್ರಹ್ಮಾವರ ತಾಲೂಕಿನ ಬಾರಾಳಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಪರೂಪದ ಶಿಕ್ಷಕ. ಶಾಲೆಯ ದೈಹಿಕ ಶಿಕ್ಷಕ ಕೆಲಸದೊಂದಿಗೆ, ಸ್ಕೂಲ್ ಬಸ್ಸಿನ ಡ್ರೈವರ್ ಆಗಿಯೂ ಕೆಲಸ ಮಾಡುವ ರಾಜಾರಾಮ್, ಸಮಾಜ ವಿಜ್ಞಾನ- ಗಣಿತ ಪಾಠಗಳನ್ನೂ ಅಷ್ಟೇ ಸೊಗಸಾಗಿ ಬೋಧಿಸುತ್ತಾರೆ.
ಈ ಶಾಲೆಗೆ ಮಕ್ಕಳನ್ನು ಕಳಿಸೋದು ಅಂದ್ರೆ, ಪೋಷಕರಿಗೂ ಅಪಾರ ಖುಷಿ. ರಾಜಾರಾಮ್ ಸರ್ ವಹಿಸುವ ಕಾಳಜಿ, ಊರಿನವರ ಮನ ಗೆದ್ದಿದೆ. ಮಳೆ ಇರಲಿ, ಬಿಸಿಲಿರಲಿ… ಮಕ್ಕಳನ್ನು ಸುರಕ್ಷಿತವಾಗಿ ಮನೆಯಿಂದ ಕರೆದೊಯ್ದು, ಅವರನ್ನು ಶಾಲಾ ದೇಗುಲಕ್ಕೆ ತಲುಪಿಸಿ, ಅಲ್ಲಿಂದ ಪುನಃ ಮನೆಯ ಬಾಗಿಲಿಗೆ ತಂದುಬಿಡುವ ದೇವರು. ಬಡಮಕ್ಕಳ ಸಮವಸ್ತ್ರ, ಪುಸ್ತಕಗಳಿಗಾಗಿಯೇ, ಸುಮಾರು 70 ಸಾವಿರ ರೂ. ಖರ್ಚು ಮಾಡಿರುವ ಉದಾರಿಯೂ ಹೌದು.
– ಮಹಮ್ಮದ್ ಅಲ್ಫಾಜ್, ಕಾರ್ಕಳ