ವಾಡಿ: ಚಿತ್ತಾಪುರ ತಾಲೂಕು ನಾಲವಾರ ವಲಯದ ಭೀಮಾ ತಡದಲ್ಲಿರುವ ಕುಲಕುಂದಾ ಎಂಬ ಈ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಕಳೆದ ಐದಾರು ವರ್ಷಗಳಿಂದ ಮರದ ಕೆಳಗೆ ಪಾಠ ಕೇಳುತ್ತಿದ್ದಾರೆ!
ಮಳೆ ನೀರಿನ ಸೋರಿಕೆಯಿಂದಾಗಿ ತರಗತಿ ಕೋಣೆಗಳೆಲ್ಲ ಕೊಳೆತಂತೆ ಕಾಣಿಸುತ್ತವೆ. ಗೋಡೆಗಳು ಅಡ್ಡಾದಿಡ್ಡಿ ಬಿರುಕು ಬಿಟ್ಟು ಎತ್ತೆತ್ತಲೋ ವಾಲಿ ನಿಂತಿವೆ. ಶಾಲೆಯೊಳಗೆ ಕಾಲಿಡಲು ಮಕ್ಕಳು ಮತ್ತು ಶಿಕ್ಷಕರು ಭಯಪಡುತ್ತಾರೆ. ಶಿಥಿಲ ಶಾಲಾ ಕಟ್ಟದ ಮುಂದೆ ಇರುವ ಆಲದ ಮರಗಳ ಕೆಳಗೆ ಏಳು ತರಗತಿಗಳು ನಡೆಯುತ್ತಿವೆ. ಗಾಳಿ ಮಳೆ ಶುರುವಾದರೆ ಪಕ್ಕದ ದೇವಸ್ಥಾನದ ಗೋಡೆಗಳ ಆಸರೆ ಪಡೆಯಬೇಕು. ಮಳೆ ನಿಲ್ಲುವ ಲಕ್ಷಣ ಕಾಣದಿದ್ದರೆ ಮಕ್ಕಳೆಲ್ಲ ಮನೆ ಸೇರಿಕೊಳ್ಳುತ್ತಾರೆ. ಬೆಳಗ್ಗೆ ಮೋಡಗಳು ಕಾಣಿಸಿಕೊಂಡರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಇಂತಹ ಬಯಲು ವಾತಾವರಣದಲ್ಲಿ ಅಸುರಕ್ಷಿತ ಸ್ಥಳದಲ್ಲಿ ಶಾಲೆ ನಡೆಯುತ್ತಿದ್ದು, ಸಿಎಂ ಎಚ್‌ಡಿಕೆ ಇಲ್ಲಿ ವಾಸ್ತವ್ಯಕ್ಕೆ ಬರುವುದು ಬೇಡ. ಕನಿಷ್ಠ ಪಕ್ಷ ಮಕ್ಕಳ ದುಸ್ಥಿತಿ ನೋಡಲಾದರೂ ಬರಲಿ ಎಂಬುದು ಗ್ರಾಮಸ್ಥರ ಮನವಿ.
ಶಿಕ್ಷಕರ ಸಂಖ್ಯೆ ಮತ್ತು ಮಕ್ಕಳ ಹಾಜರಾತಿ ಸಮಸ್ಯೆಯೇ ಈ ಶಾಲೆಯಲ್ಲಿಲ್ಲ. ಇರುವ ಪ್ರಮುಖ ಸಮಸ್ಯೆ ಎಂದರೆ ಅದು ಶಾಲಾ ಕಟ್ಟಡದ್ದು. ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ವಿವಾದದಲ್ಲಿದ್ದ ಹಳೆ ಶಾಲಾ ಕಟ್ಟಡದ ಜಾಗವನ್ನು ವಾರಸುದಾರರು ಕಳೆದ ವರ್ಷವೇ ಶಿಕ್ಷಣ ಇಲಾಖೆಗೆ ದಾನವಾಗಿ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಅವರು ನೂತನ ಶಾಲಾ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವರ್ಷ ಕಳೆದಿದೆ. ಕಟ್ಟಡ ಮಾತ್ರ ತಳಪಾಯ ಬಿಟ್ಟು ಮೇಲೇಳುತ್ತಿಲ್ಲ. ಕಿರಿಯ ಅಭಿಯಂತರ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆಮಟ್ಟಕ್ಕೆ ಜಾರಿದೆ. ಅಲ್ಲದೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಮಕ್ಕಳು ಪಾಟಿ ಚೀಲದೊಂದಿಗೆ ಬಯಲಿಗೆ ಬಿದ್ದಿದ್ದಾರೆ. ಮರದ ಆಸರೆಗೆ ಮತ್ತು ದೇವರ ಗುಡಿಯೊಳಗೆ ಕುಳಿತು ಅಭ್ಯಾಸ ನಡೆಸುತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣಕ್ಕೆ ವೇಗದ ಗತಿ ನೀಡಬೇಕು. ತಾತ್ಕಾಲಿಕವಾಗಿ ಮಕ್ಕಳಿಗೆ ಟೆಂಟ್ ಶಾಲೆಯನ್ನಾದರೂ ನಿರ್ಮಿಸಬೇಕು ಎಂದು ಗ್ರಾಮದ ಮಂಜುನಾಥ ಪೂಜಾರಿ, ಮುತ್ತುರಾಜ ಹೊಸಮನಿ, ಮಲ್ಲಪ್ಪ ದ್ಯಾವಪ್ಪನೋರ, ಈರಪ್ಪ ಪೂಜಾರಿ, ಮಾರುತಿ ಹೊಸಮನಿ ಆಗ್ರಹಿಸಿದ್ದಾರೆ.
•ಮಡಿವಾಳಪ್ಪ ಹೇರೂರ