Advertisement

ಶಾಲೆ ದತ್ತು; ಕಾಯುತ್ತಿವೆ ನಿರೀಕ್ಷೆ ಹೊತ್ತು

11:24 AM Dec 21, 2020 | sudhir |

ಧಾರವಾಡ: ಶಾಸಕರ ದತ್ತು ಶಾಲೆ ಯೋಜನೆಯಡಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ-71ರ ಶಾಸಕ ಅಮೃತ ದೇಸಾಯಿ ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರು ಶಾಲೆಗಳನ್ನು ದತ್ತು ಪಡೆದಿದ್ದಾರೆ.

Advertisement

ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಬೇಲೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮುಗಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಕಳೆದ ತಿಂಗಳಷ್ಟೇ ದತ್ತು ಪಡೆಯಲಾಗಿದೆ. ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾರ್ಯಗಳ ಕ್ರಿಯಾ ಯೋಜನೆ ಸಿದ್ಧಗೊಂಡು ಸಲ್ಲಿಕೆಯಾಗಬೇಕಿದೆ. ಈ ಮೂರು ಶಾಲೆಗಳ ಪೈಕಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಎಸ್‌ಡಿಎಂಸಿ ಅಧ್ಯಕ್ಷರು ಶಾಸಕರೇ ಆಗಿದ್ದಾರೆ. ಮೂರೂ ಶಾಲೆಗಳಲ್ಲಿ ಆಗಬೇಕಿರುವ ಕಾರ್ಯ, ಅಗತ್ಯಗಳ ಬಗ್ಗೆ ಶಾಲಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ಕ್ರಿಯಾಯೋಜನೆ ಸಿದ್ಧಗೊಂಡು ಕಾಮಗಾರಿಗಳಿಗೆ ಚಾಲನೆ ಕೊಡಬೇಕಿದೆ.

ದತ್ತು ಪಡೆದಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮಂಜೂರಾತಿ ದೊರೆತಿರುವ ಹುದ್ದೆಗಳ ಪೈಕಿ ಕೆಲವೊಂದಿಷ್ಟು
ಈವರೆಗೂ ಭರ್ತಿಯಾಗಿಲ್ಲ. ಶಾಸಕರೇ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿಯೇ ನಾಲ್ಕು ಹುದ್ದೆ ಖಾಲಿ ಇದೆ. ಮುಗಳಿಯ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ, ವಿಜ್ಞಾನ ಹಾಗೂ ಬೇಲೂರಿನ ಶಾಲೆಯಲ್ಲಿ ಕನ್ನಡ, ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಬಹುತೇಕ ಕೊಠಡಿಗಳು ದುರಸ್ತಿ ಆಗಬೇಕಿವೆ. ಹೊಸದಾಗಿ ಕೊಠಡಿಗಳು ಹಾಗೂ ಶೌಚಾಲಯಗಳ ಅಗತ್ಯವೂ ಇದೆ. ಶಾಸಕರು ದತ್ತು ಪಡೆದಿರುವುದರಿಂದ ಅಗ್ತಯ ಸೌಲಭ್ಯಗಳ ನಿರೀಕ್ಷೆಯಲ್ಲಿ ಶಾಲೆಗಳಿವೆ.

ಕರಡಿಗುಡ್ಡದ ಕರ್ನಾಟಕ ಪಬ್ಲಿಕ್‌ ಸೂಲ್‌
ಶಾಸಕ ಅಮೃತ ದೇಸಾಯಿ ಅವರೇ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು, ಪ್ರಾಥಮಿಕ, ಪ್ರೌಢ ಹಾಗೂ ಪಿಯು ವಿಭಾಗಗಳಲ್ಲಿ 844 ವಿದ್ಯಾರ್ಥಿಗಳಿದ್ದಾರೆ. ಉದ್ಯಾನವನ, ಮೈದಾನ ಚೆನ್ನಾಗಿರುವ ಕಾರಣ ಕಲಿಕೆಗೆ ಒಳ್ಳೆಯ ವಾತಾವರಣ ಇದೆ. ತಕ್ಕಮಟ್ಟಿಗೆ ಅಭಿವೃದ್ಧಿಯಾಗಿದೆ. ಆದರೆ 116 ವರ್ಷ ಕಂಡಿರುವ ಪ್ರಾಥಮಿಕ ಶಾಲೆಯ 6 ಹಾಗೂ ಪ್ರೌಢಶಾಲೆಯ 4 ಕೊಠಡಿಗಳ ದುರಸ್ತಿ ಕಾರ್ಯ ಆಗಬೇಕಿದೆ. ಒಟ್ಟು 10 ಕೊಠಡಿಗಳ ದುರಸ್ತಿ ಕಾರ್ಯದ ಜೊತೆಗೆ ಪ್ರಾಥಮಿಕ ಶಾಲೆಗೆ ಹೊಸದಾಗಿ 5 ಕೊಠಡಿಗಳ ಅಗತ್ಯವಿದೆ. ಈಗಾಗಲೇ ಕೆಲ ಕೊಠಡಿ ನಿರ್ಮಾಣ ಕಾರ್ಯಕ್ಕೆ ಶಾಸಕರು ಚಾಲನೆ ನೀಡಿದ್ದಾರೆ. ಮೂರೂ ವಿಭಾಗಗಳಲ್ಲಿ ತಲಾ ಎರಡು ಹೆಚ್ಚುವರಿ ಶೌಚಾಲಯಗಳು ಬೇಕಿವೆ.

ಮುಗಳಿ ಸರ್ಕಾರಿ ಪ್ರಾಥಮಿಕ ಶಾಲೆ
95 ವರ್ಷ ಪೂರೈಸಿ ಶತಮಾನ ಕಾಣುವ ಸನ್ನಿಹಿತದಲ್ಲಿರುವ ಈ ಶಾಲೆಯಲ್ಲಿ 180 ಮಕ್ಕಳ ಹಾಜರಾತಿ ಇದೆ. ಮಂಜೂರಾಗಿರುವ 8 ಶಿಕ್ಷಕರ ಪೈಕಿ ಮೂರು ಹುದ್ದೆ ಖಾಲಿಯಾಗಿವೆ. ವಿಜ್ಞಾನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಕಾಂಪೌಂಡ್‌ ಇಲ್ಲದ ಶಾಲೆಯಲ್ಲಿರುವ ಆರು ಕೊಠಡಿಗಳ ಪೈಕಿ 4 ಕೊಠಡಿಗಳು ದುರಸ್ತಿ ಮಾಡಲು ಆಗದಂತಹ ಸ್ಥಿತಿಯಲ್ಲಿವೆ. ಹೀಗಾಗಿ 2 ಕೊಠಡಿಗಳಲ್ಲಷ್ಟೇ ಕಲಿಕೆ
ಮಾಡುತ್ತಿದ್ದು, 4 ಕೊಠಡಿಗಳ ತೆರವಿಗೆ ಉದ್ದೇಶಿಸಲಾಗಿದೆ.

Advertisement

ಬೇಲೂರು ಸರ್ಕಾರಿ ಪ್ರಾಥಮಿಕ ಶಾಲೆ
ಹಂಚಿನ ಮೇಲ್ಛಾವಣಿ ಹೊಂದಿರುವ ಶಾಲೆಯಲ್ಲಿ 370 ಮಕ್ಕಳಿದ್ದು, ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ಶಾಲೆಗೆ
ಮಂಜೂರು ಇರುವ 11 ಶಿಕ್ಷಕರ ಪೈಕಿ ಮೂರು ಹುದ್ದೆ ಖಾಲಿಯಿದ್ದು, ಕನ್ನಡ, ಸಮಾಜ ವಿಜ್ಞಾನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಈಗಿರುವ 11 ಕೊಠಡಿಗಳ ಪೈಕಿ 5 ಸುಸ್ಥಿತಿಯಲ್ಲಿದ್ದರೆ 4 ಕೊಠಡಿಗಳ ದುರಸ್ತಿ ಆಗಬೇಕಾಗಿದೆ. 3 ಕೊಠಡಿಗಳು ಈಗಾಗಲೇ
ದುಸ್ಥಿತಿಯಲ್ಲಿವೆ. ಹೀಗಾಗಿ ಕೊಠಡಿಗಳ ದುರಸ್ತಿ ಜೊತೆಗೆ ಹೊಸದಾಗಿ ನಾಲ್ಕು ಕೊಠಡಿಗಳು ಬೇಕು.

Advertisement

Udayavani is now on Telegram. Click here to join our channel and stay updated with the latest news.

Next