Advertisement

ವಿದ್ಯಾರ್ಥಿ ವೇತನ; ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಿಸಿ

02:45 PM Jul 07, 2019 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಬಾಕಿ ಉಳಿದ ಎಲ್ಲ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಆಧಾರ ಜೋಡಣೆಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶನಿವಾರ ಜರುಗಿದ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಗೆ ಕುರಿತು ಬ್ಯಾಂಕರ್ ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ ಬಟ್ಟೆಗಳನ್ನು ನೀಡಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿ ವೇತನವು ಸಹ ಅವಶ್ಯವಾಗಿದೆ. ಈ ಹಿಂದೆ ವಿದ್ಯಾರ್ಥಿ ವೇತನ ಸಮಯಕ್ಕೆ ಸರಿಯಾಗಿ ವಿತರಣೆ ಆಗುತ್ತಿರಲಿಲ್ಲ. ಆದರೆ ಈಗ ಆನ್‌ಲೈನ್‌ ಮೂಲಕ ಈ ಪ್ರಕ್ರಿಯೆ ಕೈಗೊಂಡಿದ್ದರಿಂದ ವಿದ್ಯಾರ್ಥಿ ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದರು.

ಸರ್ಕಾರ ಪ್ರತಿಯೊಂದು ಯೋಜನೆಗಳ ಫಲಾನುಭವಿಗಳಿಗೆ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಅದರಂತೆ ವಿದ್ಯಾರ್ಥಿ ವೇತನವು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಪ್ರತಿಯೊಂದು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ ಜೋಡನೆಯಾದಲ್ಲಿ ಮಾತ್ರ ಅವರ ಖಾತೆಗೆ ಜಮಾ ಆಗುತ್ತದೆ. ಇಲ್ಲದಿದ್ದರೆ ಜಮಾ ಆಗುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಬಾಕಿ ಇರುವ ವಿದ್ಯಾರ್ಥಿಗಳ ಖಾತೆಗೆ ಆಧಾರ್‌ ಜೋಡಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಆಧಾರ್‌ ಜೋಡಣೆ ಪ್ರಕ್ರಿಯೆ ಜೂನ್‌ನಲ್ಲಿ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 19,684 ಬ್ಯಾಂಕ್‌ ಖಾತೆಗಳ ಪೈಕಿ 10234 ಖಾತೆಗೆಳಿಗೆ ಮಾತ್ರ ಆಧಾರ್‌ ಜೋಡಣೆಯಾಗಿದೆ. ಇನ್ನು 9450 ಖಾತೆಗಳಿಗೆ ಬಾಕಿ ಉಳಿದಿವೆ. ಅದರಲ್ಲಿ ಬಾದಾಮಿ ತಾಲೂಕು 2082, ಬಾಗಲಕೋಟೆ 984, ಬೀಳಗಿ 763, ಹುನಗುಂದ 997, ಜಮಖಂಡಿ 2432 ಹಾಗೂ ಮುಧೋಳ ತಾಲೂಕಿನಲ್ಲಿ 2192 ಬಾಕಿ ಉಳಿದ್ದು, ತುರ್ತಾಗಿ ಆಧಾರ ಜೋಡಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

Advertisement

ಆಧಾರ್‌ ಜೋಡಣೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಸಹಕಾರವು ಅಗತ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎಚ್. ಗೋನಾಳ ತಿಳಿಸಿದರು.

ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಕೇಳಿದಾಗ ಆಧಾರ್‌ ಜೋಡಣೆ ಬೇಗನೇ ಆಗುತ್ತಿಲ್ಲ. ಬ್ಯಾಂಕ್‌ನವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಕೆಲವು ಅಧಿಕಾರಿಗಳು ತಿಳಿಸಿದರು.

ಅಲ್ಲದೇ ಅಂಚೆ ಕಚೇರಿಯಲ್ಲಿ ಪ್ರಾರಂಭವಾದ ಐಪಿಪಿಬಿಯಲ್ಲಿ ಬೇಗನೇ ಆಧಾರ್‌ ಸೀಡ್‌ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆ ತೆರೆಯಲು ತಿಳಿಸಿದರು.

ಅಂಚೆ ಇಲಾಖೆಯ ಶ್ರೀನಿವಾಸ ಮಾತನಾಡಿ, ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಜೂನ್‌ ತಿಂಗಳಲ್ಲಿ 900 ಸಾವಿರ ಬ್ಯಾಂಕ್‌ ಖಾತೆ ಮಾಡಿಕೊಳ್ಳಲಾಗಿದೆ. 10 ವರ್ಷ ಮೇಲ್ಪಟ್ಟ ಮಕ್ಕಳಿದ್ದಲ್ಲಿ ಬ್ಯಾಂಕ್‌ ಖಾತೆ ತೆರೆಯಬಹುದು. ಆದರೆ 10 ವರ್ಷಕ್ಕಿಂತ ಕೆಳಗಿನವರು ಪಿಒಎಸ್‌ಬಿಯಡಿಯಲ್ಲಿ ಜಂಟಿ ಖಾತೆ ತೆರೆಯಲು ಅವಕಾಶವಿದೆ. ಬ್ಯಾಂಕ್‌ ಖಾತೆ ತೆರೆಯುವ ವೇಳೆಯಲ್ಲಿಯೇ ಆಧಾರ್‌ ಜೋಡಣೆ ಮಾಡಲಾಗುತ್ತದೆ. ಕೆಲವೊಂದು ವಿದ್ಯಾರ್ಥಿಗಳ ಆಧಾರ ಜೋಡಣೆಯಾಗದಿದ್ದಲ್ಲಿ 5 ವರ್ಷದೊಳಗಿನ ಆಧಾರ್‌ ಕಾರ್ಡ್‌ನ್ನು ಅಪ್‌ಡೆಟ್ ಮಾಡಲು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ವಿ.ಎಸ್‌. ಹಿರೇಮಠ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ, ಅಲ್ಪಸಂಖ್ಯಾತರ ಇಲಾಖೆಯ ಉಪ ನಿರ್ದೇಶಕ ಎಂ.ಎನ್‌. ಮೇಲಿನಮನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next