ವರದಿ: ಶಿವಶಂಕರ ಕಂಠಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಹೆಗ್ಗೇರಿ ಆಯುರ್ವೇದ ಕಾಲೇಜಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸೇರಬೇಕಾದ ಅಂದಾಜು 24 ಲಕ್ಷ ರೂ. ವಿದ್ಯಾರ್ಥಿ ವೇತನ ವಂಚನೆ ಪ್ರಕರಣದ ಹಿಂದೆ ಇರುವ ಕಾಣದ ಕೈಗಳು ಯಾವವು ಎಂಬ ಜಿಜ್ಞಾಸೆ ಆಡಳಿತ ಮಂಡಳಿ, ಪ್ರಾಂಶುಪಾಲರನ್ನು ಕಾಡತೊಡಗಿದೆ. ಕಾಲೇಜು ಹೆಸರಲ್ಲಿ ಬ್ಯಾಂಕ್‌ನಲ್ಲಿ ಖಾತೆ ಆರಂಭಿಸಿ, ವಿದ್ಯಾರ್ಥಿ ವೇತನ ಅದಕ್ಕೆ ವರ್ಗಾಹಿಸಿಕೊಂಡಿರುವುದು ಆಡಳಿತ ಮಂಡಳಿಗೆ ಅಚ್ಚರಿ ಮೂಡಿಸಿದೆ.
ಮೂರು ವರ್ಷಗಳವರೆಗೂ ಇದು ಗಮನಕ್ಕೆ ಬಾರದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಹೆಗ್ಗೇರಿ ಆಯುರ್ವೇದ ಕಾಲೇಜಿನಲ್ಲಿ 2017-18ನೇ ಸಾಲಿನ ಸುಮಾರು 100 ಹಿಂದುಗಳಿ ವರ್ಗದ ವಿದ್ಯಾರ್ಥಿಗಳಿಗೆ ಸೇರಬೇಕಾಗಿದ್ದ 24,04,090ರೂ. ವಿದ್ಯಾರ್ಥಿ ವೇತನ ಅನ್ಯರ ಪಾಲಾಗಿದೆ ಎಂದು ಹೇಳಲಾಗುತ್ತಿದೆ.
ವಂಚಕರು ಮಾಡಿದ್ದಾದರೂ ಏನು?: ಹೆಗ್ಗೇರಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗದ ಇಲಾಖೆಯಿಂದ ಪ್ರತಿವರ್ಷ ವಿದ್ಯಾರ್ಥಿ ವೇತನ ಮಂಜೂರು ಆಗುತ್ತದೆ. ಈ ಹಣವು ನೇರವಾಗಿ ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮಾ ಆಗುತ್ತದೆ. ಅವರು ಈ ಹಣವನ್ನು ವಿದ್ಯಾರ್ಥಿಗಳಿಗೆ ಚೆಕ್ ಮೂಲಕ ಇಲ್ಲವೆ ಆರ್‌ಟಿಜಿಎಸ್ ಮುಖಾಂತರ ಬಟವಡೆ ಮಾಡುತ್ತಾರೆ. ಈ ವೇಳೆ ಚೆಕ್‌ಗೆ ಕಡ್ಡಾಯವಾಗಿ ಪ್ರಾಂಶುಪಾಲರು ಮತ್ತು ಸಂಸ್ಥೆ ಆಡಳಿತ ಮಂಡಳಿ ಚೇರ್ಮನ್ ಜಂಟಿಯಾಗಿ ಸಹಿ ಮಾಡಿರುತ್ತಾರೆ. ಇದನ್ನೆಲ್ಲ ಬಲ್ಲವರೇ ಪ್ರವಾಸಿ ಮಂದಿರ ರಸ್ತೆಯಲ್ಲಿನ ಐಸಿಐಸಿಐ ಬ್ಯಾಂಕ್‌ನಲ್ಲಿ ಕಾಲೇಜಿನ ಹೆಸರಿನಲ್ಲಿ ಖಾತೆ ತೆರೆದಿದ್ದಾರೆ. ಅದಕ್ಕೆ ಕಾಲೇಜಿನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವರ್ಗಾಯಿಸಿಕೊಂಡು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ.
ಕಾಲೇಜಿನ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ವಿದ್ಯಾರ್ಥಿ ವೇತನ ಸಿಕ್ಕಿಲ್ಲವೆಂಬುದು ಪ್ರಾಚಾರ್ಯ ಡಾ| ಪ್ರಶಾಂತ ಅವರಿಗೆ ತಡವಾಗಿ ಗೊತ್ತಾಗಿದ್ದು, ಜೂ. 24ರಂದು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.