ಬೆಂಗಳೂರು: ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಪ್ರಾಣ ಕಳೆದುಕೊಳ್ಳುವ ಸಿಬ್ಬಂದಿ ಕುಟುಂಬಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕರ್ತವ್ಯ ನಿರತರಾಗಿದ್ದಾಗ ಮೃತಪಡುವ ಸಿಬ್ಬಂದಿ ಮಕ್ಕಳಿಗೆ ಪ್ರಸ್ತುತ ಸಾಲಿನಿಂದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ. ಅರಣ್ಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಚಿವರು ಮಾತನಾಡಿದರು.
ಅರಣ್ಯ ರಕ್ಷಣೆ ಕಾರ್ಯಾಚರಣೆ ವೇಳೆ ಅವಘಡಗಳು ಅಥವಾ ಕಾಡು ಪ್ರಾಣಿಗಳ ದಾಳಿಗೊಳಗಾಗಿ ಪ್ರಾಣ ತ್ಯಾಗ ಮಾಡುವ ಕರ್ತವ್ಯ ನಿರತ ಸಿಬ್ಬಂದಿ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಇದಕ್ಕಾಗಿ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ ಸಮಿತಿ ಸಂಗ್ರಹಿಸಿರುವ 20 ಲಕ್ಷ ರೂ. ದೇಣಿಗೆ ಹಾಗೂ ಸರ್ಕಾರದ ಅನುದಾನವನ್ನು ಬಳಸಿಕೊಳ್ಳಲಾಗುವುದು. ಇದರಿಂದ ಹುತಾತ್ಮ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.
ಪರಿಸರ ಸಮತೋಲನಕ್ಕೆ ಅರಣ್ಯ ರಕ್ಷಣೆ ಮುಖ್ಯ. ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಸರ್ಕಾರದೊಂದಿಗೆ ನಾಗರಿಕ ಸಮಾಜ ಸಹ ಕೈಜೋಡಿಸಬೇಕು. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗೆ ತಮ್ಮ ಪ್ರಾಣವನ್ನು ತ್ಯಾಗ ಮಾಡುವವರನ್ನು ಸ್ಮರಿಸಿಕೊಳ್ಳುವುದು ನಮ್ಮ ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ. ಕಾಡುಗಳ್ಳ ವೀರಪ್ಪನ್‌ನಿಂದ ಹತರಾದ ಐಎಫ್ಎಸ್ ಅಧಿಕಾರಿ ಶ್ರೀನಿವಾಸ್ ಮರಣ ಹೊಂದಿದ ದಿನವನ್ನು ರಾಜ್ಯ ಸರ್ಕಾರ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದೆ ಎಂದು ಸಚಿವರು ಸ್ಮರಿಸಿಕೊಂಡರು.
“ಕಾನನ ಸೇನಾನಿಗಳು’ ಧ್ವನಿಸುರಳಿ ಸಿದ್ಧ: ಹುತಾತ್ಮ ಐಎಫ್ಎಸ್ ಅಧಿಕಾರಿ ದಿವಂಗತ ಶ್ರೀನಿವಾಸ ಹಾಗೂ ಸಿಬ್ಬಂದಿಗಳ ಕುರಿತ ಕಾನನ ಸೇನಾನಿಗಳು ಚಿತ್ರದ ಧ್ವನಿ ಮುದ್ರಣ ತಯಾರಾಗಿದೆ. ಶೀಘ್ರದ್ಲಲೇ ವಿಡಿಯೋ ಸಿಡಿ ಸಹ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ 50 ಲಕ್ಷ ರೂ. ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಪರಿಹಾರಕ್ಕಾಗಿ ಮನವಿ: ರಾಮನಗರದ ಮಾಗಡಿ ತಾಲೂಕಿನ ಭಂಟರಕುಪ್ಪೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಪಂಚಲಿಂಗಯ್ಯ, ನಾಡಿಗೆ ಬಂದ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಿ ವಾಪಸ್ ಬರುವಾಗ ಅದೇ ಆನೆಗಳ ಹಿಂಡು ದಾಳಿ ನಡೆಸಿದ್ದರಿಂದ 2016 ಸೆ.9ರಂದು ಮೃತಪಟ್ಟಿದ್ದರು.
25 ಲಕ್ಷ ರೂ. ಪರಿಹಾರ ಹಾಗೂ ಪತ್ನಿಗೆ ಉದ್ಯೋಗ ಕೊಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿತ್ತು. ಆದರೆ, ಆಂತ್ಯಕ್ರಿಯೆ ವೇಳೆ ಕೊಟ್ಟ 5 ಲಕ್ಷ ರೂ. ಬಿಟ್ಟರೆ ಇನ್ಯಾವ ಪರಿಹಾರವೂ ನೀಡಿಲ್ಲವೆಂದು ಪಂಚಲಿಂಗಯ್ಯ ಅವರ ಪತ್ನಿ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಸಚಿವ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದರು. ಮನವಿ ಆಲಿಸಿದ ಸಚಿವರು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.