Advertisement

ಶಿಕ್ಷಕರಿಗೆ ಶಿಷ್ಯವೇತನ ಅರ್ಜಿ ಭಾರ!

03:44 PM Sep 21, 2018 | Team Udayavani |

ಗಜೇಂದ್ರಗಡ: ಮಕ್ಕಳ ಬೋಧನೆಗೆ ಹೆಚ್ಚು ಒತ್ತು ನೀಡಬೇಕಾದ ಶಿಕ್ಷಕರಿಗೆ ಈಗ ಮೊತ್ತ ಭಾರ ಎದುರಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷ ಒಂದರ ಮೇಲೊಂದರಂತೆ ಆದೇಶ ಜಾರಿಗೊಳಿಸುತ್ತಲೇ ಇದೆ. ಪಾಠಕ್ಕಿಂತ ಇಲಾಖೆ ಕೆಲಸವೇ ಶಿಕ್ಷಕರನ್ನು ಹೈರಾಣಾಗಿಸುವಂತೆ ಮಾಡಿದೆ. ಇದರಿಂದ ಯಾವಾಗ ಮುಕ್ತಿ ಹೊಂದುತ್ತೆವೆಯೋ ಎನ್ನುವಷ್ಟರಲ್ಲಿಯೇ ಈಗ ಮತ್ತೊಂದು ಕೆಲಸ ಮಾಡುವುದು ಅನಿವಾರ್ಯವಾಗಿದೆ.

Advertisement

ಈ ಹಿಂದೆ 1ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುವ ಮಕ್ಕಳ ಶಿಷ್ಯ ವೇತನ ಅರ್ಜಿ ಭರ್ತಿ ಮಾಡಿ ದಾಖಲೆ ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಗೆ ಶಿಕ್ಷಕರು ಹಸ್ತಾಂತರಿಸುತ್ತಿದ್ದರು. ಯಾವುದೇ ಗೊಂದಲವಿಲ್ಲದೇ ಈ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈ ಬಾರಿ ಹೊಸ ನಿಯಮ ಜಾರಿಗೊಳಿಸಿದೆ. ವ್ಯಾಸಾಂಗನಿರತ ವಿದ್ಯಾರ್ಥಿಗಳ ಶಿಷ್ಯ ವೇತನ ಅರ್ಜಿಗಳನ್ನು ಆಯಾ ಶಾಲೆ ಶಿಕ್ಷಕರೇ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಾಗಿದೆ. ಇದು ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ.

ಕೈ ಕೊಡುತ್ತಿರುವ ಸರ್ವರ್‌: ಯಾವುದೇ ಶಾಲೆ ಮಕ್ಕಳು ಶಿಷ್ಯವೇತನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯೋಪಾದ್ಯಾಯರಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ಪ್ರತಿ ಶಾಲೆಯಲ್ಲಿನ ಅಂದಾಜು 150ರಿಂದ 200 ವಿದ್ಯಾರ್ಥಿಗಳ ದಾಖಲೆ ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಸೆ. 1ರಿಂದ ಆರಂಭಿಸಿರುವ ಎಸ್‌ಎಸ್‌ಪಿ ಕರ್ನಾಟಕ ಎನ್ನುವ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಬೇಕು. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಶಿಕ್ಷಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಶಾಲೆಯಲ್ಲೇ ಜಾಗರಣೆ: ಮಕ್ಕಳಿಗೆ ಪಾಠ ಮಾಡಿ ಶಾಲೆ ಮುಗಿದ ತಕ್ಷಣ ಮನೆಗೆ ಹಿಂತಿರುಗುತ್ತಿದ್ದ ಶಿಕ್ಷಕರಿಗೀಗ, ಮಕ್ಕಳ ಸ್ಕಾಲರ್‌ ಶಿಫ್‌ ಅರ್ಜಿ ಹಾಕಲು ಮಧ್ಯರಾತ್ರಿ ವರೆಗೂ ಶಾಲೆಯಲ್ಲೇ ಉಳಿಯುವಂತಹ ದುಸ್ಥಿತಿ ಬಂದೊದಗಿದೆ.

ಕೇಂದ್ರಗಳು ಫುಲ್‌ರಶ್‌: ಶಿಷ್ಯವೇತನಕ್ಕಾಗಿ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ನಲ್ಲಿ ಅಪಲೋಡ್‌ ಮಾಡಬೇಕು ಎಂದು ಶಿಕ್ಷಣ ಇಲಾಖೆ ಶಿಕ್ಷಕರಿಗೆ ಆದೇಶಿಸಿದೆ. ಆದರೆ ಕಂಪ್ಯೂಟರ್‌ ಸೌಲಭ್ಯಗಳಿಲ್ಲ. 8ರಿಂದ 10 ಶಾಲೆಗಳನ್ನು ಸೇರಿ 1 ಕಂಪ್ಯೂಟರ್‌ ಇರುವ ಶಾಲೆಯನ್ನು ಕೇಂದ್ರವನ್ನಾಗಿ ಹಂಚಿಕೆ ಮಾಡಿದ್ದಾರೆ. ಈಗಾಗಲೇ ಸರ್ವರ ಸಮಸ್ಯೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಆ ಕೇಂದ್ರದಲ್ಲಿ ದಿನಗಟ್ಟಲೆ ವಿವಿಧ ಶಾಲೆ ಶಿಕ್ಷಕರು ಕಾಯಬೇಕಾದ ಸ್ಥಿತಿ ಎದುರಾಗಿದೆ. ಪಾಠಕ್ಕೆ ಬಿತ್ತು ಬ್ರೇಕ್‌: ಕಳೆದ ಎರಡು ವಾರಗಳಿಂದ ಶಿಷ್ಯವೇತನ ಅರ್ಜಿ ಭರ್ತಿ ಮಾಡುವ ಭರದಲ್ಲಿರುವ ಶಿಕ್ಷಕರಿಗೆ ದಿನಂಪ್ರತಿ ಶಿಷ್ಯವೇತನ ಅರ್ಜಿಗಳ ಸ್ವೀಕಾರದ್ದೆ ಕೆಲಸ ಆಗಿದೆ. ಇದರಿಂದ ಮಕ್ಕಳ ಪಠ್ಯ ಬೋಧನೆಗೆ ಹಿನ್ನಡೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ ಶಾಲೆ ಬಹುಪಾಲು ಶಿಕ್ಷಕರು ಶಿಷ್ಯ ವೇತನ ಅರ್ಜಿ ಭರ್ತಿ ಮಾಡುವುದರಲ್ಲೇ ತೊಡಗಿರುವುದರಿಂದ  ಠಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಸಂಬಂಧ ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶೇ. 70ರಷ್ಟು ವಿದ್ಯಾರ್ಥಿಗಳ ಅರ್ಜಿಗಳನ್ನು ಆನಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.
. ಎನ್‌. ನಂಜುಂಡಯ್ಯ,
  ಕ್ಷೇತ್ರ ಶಿಕ್ಷಣಾಧಿಕಾರಿ

Advertisement

ವಿದ್ಯಾರ್ಥಿ ವೇತನಕ್ಕಾಗಿ ಶಿಕ್ಷಕರೇ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು ಎಂದು ಸರಕಾರ ಹೊಸ ನಿಯಮ ಜಾರಿಗೆ ತಂದಿದೆ. ಇದು ವಿದ್ಯಾರ್ಥಿಗಳ ಕಲಿಕೆಗೆ ತೀವ್ರತರವಾದ ತೊಂದರೆಯಾಗಿದೆ. ಇದಲ್ಲದೇ ಪೋಷಕರು ಸಮಯಕ್ಕೆ ಸರಿಯಾಗಿ ದಾಖಲೆ ಸಹ ಒದಗಿಸುತ್ತಿಲ್ಲ. ಹೀಗಾಗಿ ಸರಕಾರ ಶಿಷ್ಯವೇತನ ಆನ್‌ಲೈನ್‌ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಖಾಸಗಿ ಸಂಸ್ಥೆಗಳಿಗೆ ಒದಗಿಸಲು ಮುಂದಾಗಬೇಕು.
. ಬಿ.ಎನ್‌. ಕ್ಯಾತನಗೌಡರ,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷೆ 

„ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next