Advertisement

ವೇಳಾಪಟ್ಟಿ  ಪರಿಷ್ಕರಣೆ; ವಿದ್ಯಾರ್ಥಿ, ಪೋಷಕರಿಗೆ ಸಂಕಷ್ಟ

11:00 AM Apr 16, 2018 | Harsha Rao |

ಮಂಗಳೂರು: ಪಿಯುಸಿ ವೇಳಾಪಟ್ಟಿಯನ್ನು ದಿಢೀರ್‌ ಬದಲಾಯಿಸಿ ಒಂದು ತಿಂಗಳು ಮುಂಚಿತವಾಗಿ ತರಗತಿ ಆರಂಭಿಸುವ ಪ.ಪೂ. ಶಿಕ್ಷಣ ಇಲಾಖೆಯ ಕ್ರಮ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬದಲಾವಣೆ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕ ವರ್ಗದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 
ಪ್ರತಿವರ್ಷ ಪಿಯುಸಿ ತರಗತಿ ಜೂ. 1ರಂದು ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷ ಮೇ 2ರಂದು ಆರಂಭಿಸಲು ಆದೇಶ ಹೊರಡಿಸಲಾಗಿದೆ. ಪ್ರಥಮ ಪಿಯು ತರಗತಿ ಎಸೆಸೆಲ್ಸಿ ಫಲಿತಾಂಶ ಬಂದ ಒಂದು ವಾರದೊಳಗೆ ಪ್ರಾರಂಭವಾಗಬೇಕು. 

Advertisement

ಎಪ್ರಿಲ್‌, ಮೇ ರಜೆಯ ಉದ್ದೇಶ
ಆಯಾ ಪ್ರದೇಶದ ಹವಾಮಾನ ಹೊಂದಿಕೊಂಡು ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ರಾಜ್ಯ ದಲ್ಲಿ ಎಪ್ರಿಲ್‌, ಮೇಯಲ್ಲಿ ಸುಡುಬಿಸಿಲು ಹಾಗೂ ವಿಪರೀತ ಸೆಕೆ ಇರುತ್ತದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುತ್ತದೆ. ಸಾಂಕ್ರಾಮಿಕ ರೋಗಗಳ ಹಾವಳಿ ಜಾಸ್ತಿ. ಇದ್ಯಾವುದನ್ನೂ ಪರಿಗಣಿಸದೆ ಮೇಯಲ್ಲಿ ತರಗತಿ ಆರಂಭಿಸುವ ನಿರ್ಧಾರ ಆತುರ ಮತ್ತು ಅವೈಜ್ಞಾನಿಕ ಎಂಬುದು ಶಿಕ್ಷಕರು, ಪೋಷಕರ ಅಭಿಪ್ರಾಯ.

ಚುನಾವಣಾ ಕರ್ತವ್ಯ
ಹೆಚ್ಚಿನ ಪ.ಪೂ. ಶಿಕ್ಷಕರು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ತರಗತಿ ಆರಂಭ ಗೊಂಡರೂ ಪಾಠ ನಡೆಯದು ಎಂಬುದು ಶಿಕ್ಷಕರ ಅನಿಸಿಕೆ.

ಇಲಾಖೆಯ ಸಮರ್ಥನೆ
ಉಪನ್ಯಾಸಕರಿಗೆ ಹೆಚ್ಚು ಕಾರ್ಯನಿರತ ದಿನ ದೊರೆತು ಪಠ್ಯಕ್ರಮವನ್ನು ಯಶಸ್ವಿಯಾಗಿ ಬೋಧಿಸಲು ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಈ ಹಿಂದಿನ ವೇಳಾಪಟ್ಟಿಯಂತೆ ಮಕ್ಕಳಿಗೆ ಸುಮಾರು 100 ದಿನಗಳ ಬೇಸಗೆ ರಜೆ ದೊರಕುತ್ತಿತ್ತು. ಇದರಿಂದ ಕಲಿತದ್ದನ್ನು ಮರೆಯುವ ಸಾಧ್ಯತೆ ಇರುತ್ತದೆ. ಈಚೆಗೆ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳಲ್ಲಿ ಪಿಯು ವಿದ್ಯಾರ್ಥಿಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಪ್ರವೇಶ ಪರೀಕ್ಷೆಗಳಿಗೆ ತಯಾರು ಮಾಡಲು ಹೆಚ್ಚು ಸಮಯ ದೊರಕುತ್ತದೆ. ಮೇಯಲ್ಲಿ ಕಾಲೇಜು ಆರಂಭವಾದರೆ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚುತ್ತದೆ ಎಂಬುದು ಇಲಾಖೆಯ ಸಮರ್ಥನೆ.

ಪರಿಣಾಮಗಳೇನು?
– ಪೋಷಕರ ಸಂಕಷ್ಟ 
    ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ಪಿಯುಸಿ ಪರೀಕ್ಷೆ ಮುಗಿದು ಜೂ. 1ರ ವರೆಗೆ ಮಕ್ಕಳಿಗೆ ರಜೆ. ಇದಕ್ಕೆ ಹೊಂದಿಕೊಂಡು ಪೋಷಕರು ಪ್ರವಾಸ, ಸಮಾರಂಭ ಗಳನ್ನು ನಿಗದಿ ಪಡಿಸುತ್ತಾರೆ. ದೂರ ಪ್ರವಾಸ ತೆರಳಲು ರೈಲು, ವಿಮಾನ ಟಿಕೆಟ್‌ ಕಾಯ್ದಿರಿಸುತ್ತಾರೆ. ಇಲಾಖೆ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್‌ ವೇಳಾಪಟ್ಟಿ ಬದಲಾಯಿಸಿರುವುದರಿಂದ ಇದೆಲ್ಲವೂ ಏರುಪೇರಾಗಿದೆ. 

Advertisement

– ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸಮಸ್ಯೆ
    ಈ ಬಾರಿ ಎಸೆಸೆಲ್ಸಿ ಫಲಿತಾಂಶ ಮೇ 7ಕ್ಕೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಹೊಸ ವೇಳಾ ಪಟ್ಟಿಯಂತೆ ಮೇ 14ರೊಳಗೆ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ನಡೆದು ತರಗತಿ ಪ್ರಾರಂಭವಾಗಬೇಕು. ಪ್ರವೇಶಕ್ಕೆ ಲಭಿಸುವ ಕೇವಲ ಒಂದು ವಾರದಲ್ಲಿ ಕಾಲೇಜು, ಕೋರ್ಸ್‌ ಆಯ್ಕೆ, ಶುಲ್ಕ ಪಾವತಿ, ಸಮವಸ್ತ್ರ, ಪುಸ್ತಕ ಹೊಂದಿಸಿಕೊಳ್ಳಬೇಕು.

– ಸಿಬಿಎಸ್‌ಇ, ಐಸಿಎಸ್‌ಇ ವಿದ್ಯಾರ್ಥಿಗಳ ಆತಂಕ 
    ಸಿಬಿಎಸ್‌ಇ, ಐಸಿಎಸ್‌ಇ ಫಲಿತಾಂಶ ಮೇ ಕೊನೆಗೆ ಪ್ರಕಟವಾಗುತ್ತದೆ. ಈ ವಿದ್ಯಾರ್ಥಿ ಗಳಲ್ಲಿ ಬಹುತೇಕರು ಪಿಯುಸಿಯಲ್ಲಿ ರಾಜ್ಯ ಪಠ್ಯಕ್ರಮ ಆಯ್ದುಕೊಳ್ಳುತ್ತಾರೆ. ಈ ವರ್ಷ ತರಗತಿ ಬೇಗನೆ ಆರಂಭವಾಗುವುದರಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. 

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next