Advertisement
ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 72ನೇ ಜನ್ಮದಿನಾಚರಣೆ ಪ್ರಯುಕ್ತ ಅಭಿನಂದನೆ ಮತ್ತು ಪೇಜಾವರ ಶ್ರೀಗಳಿಗೆ ಗುರುವಂದನೆ ಪ್ರಯುಕ್ತ ನಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ನಿಧಿಯ ಚೆಕ್ ಹಸ್ತಾಂತರಿಸಲಾಯಿತು. ಈ ಮೊತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರ ಸಂಘಗಳು, ಎಲ್ಲ ಸಹಕಾರಿಗಳು ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌ನ ನೌಕರರ ಒಂದು ದಿನದ ವೇತನ ಸಹಿತವಾಗಿದೆ.
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವು ಕೇವಲ ಗೋಡೆಗಳ ರಚನೆಯಲ್ಲ. ಬದಲಾಗಿ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ಅಂತಹ ಪುಣ್ಯದ ಕಾರ್ಯದಲ್ಲಿ 1 ಕೋ.ರೂ.ಗಳಿಗೂ ಮಿಗಿಲಾದ ಮೊತ್ತವನ್ನು ಸಹಕಾರ ಕ್ಷೇತ್ರದಿಂದ ನೀಡುವ ಮೂಲಕ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ಆದರ್ಶದ ಕಾರ್ಯವನ್ನು ನಡೆಸಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ಲಾಘಿಸಿದರು. ಮಂಗಳೂರಿನ ಟಿ.ವಿ.ರಮಣ ಪೈ ಕನ್ವೆನ್ಶನ್ ಹಾಲ್‌ನಲ್ಲಿ ಬುಧವಾರ ಆಯೋಜಿಸಲಾದ ಗುರುವಂದನೆ ಹಾಗೂ ಆಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಕಾರ್ಯಕ್ರಮದಲ್ಲಿ, ಶ್ರೀಗಳು ಗೌರವ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಶ್ರೀರಾಮನ ಆದರ್ಶ ಪಾಲಿಸಬೇಕು. ಗುರು ಭಾವ ಸದಾ ಜಾಗೃತವಾಗಿದ್ದಾಗ ಸಮಾಜ ಉತ್ತಮ ಪಥದಲ್ಲಿ ಸಾಗಲಿದೆ. ಈ ನೆಲೆಯಲ್ಲಿ ಡಾ| ರಾಜೇಂದ್ರ ಕುಮಾರ್ ಮೇಲ್ಪಂಕ್ತಿ ಹಾಕಿದ್ದಾರೆ ಎಂದರು.
Related Articles
Advertisement
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೊಟ ಶ್ರೀನಿವಾಸ ಪೂಜಾರಿ ಮಾತನಾಡಿ, ಧರ್ಮ, ದೇಶ ಕಟ್ಟುವ ಕಾರ್ಯ ಶ್ರೀರಾಮ ಮಂದಿರದ ಮೂಲಕ ಆಗಲಿದೆ. ಸಹಕಾರಿಗಳ ಮೂಲಕ ಈ ದೇಣಿಗೆ ದೊರೆತಿರುವುದು ರಾಜೇಂದ್ರ ಕುಮಾರ್ ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.
ಶಾಸಕ ಡಿ.ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು, ರಾಜೇಂದ್ರ ಕುಮಾರ್ ಅವರ ಪತ್ನಿ ಅರುಣಾ ರಾಜೇಂದ್ರ ಕುಮಾರ್, ಪುತ್ರ ಮೇಘರಾಜ್ ರಾಜೇಂದ್ರಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕಿನ ಸಿಇಒ ರವಿಂದ್ರ ಬಿ., ಗುರುವಂದನ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಸ್. ಕೋಟ್ಯಾನ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪ್ರಮುಖರಾದ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಗುರುವಂದನ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.