Advertisement

ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯ ರಾಶಿ: ಮಾರಕ ರೋಗಗಳ ಭೀತಿ

09:05 AM Jul 13, 2019 | sudhir |

ಕಾಸರಗೋಡು: ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಿಕ್ಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿ ಇನ್ನೂ ಮುಂದುವರಿದಿದ್ದು, ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುತ್ತಿರು ವುದರಿಂದ ಮಾರಕ ರೋಗಗಳ ಸಹಿತ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ತ್ಯಾಜ್ಯ ವಿಲೇವಾರಿಯ ಬಗ್ಗೆ ಸಾಕಷ್ಟು ಜಾಗೃತಿ, ಅಭಿಯಾನಗಳು ನಡೆಯುತ್ತಿದ್ದರೂ ಇದರಿಂದ ಈ ಬಗ್ಗೆ ಜಾಗೃತಿ ಮೂಡಿದ್ದು ಕಡಿಮೆ ಎಂದರೂ ತಪ್ಪಾಗಲಾರದೇನೋ..! ತ್ಯಾಜ್ಯ ವಿಲೇವಾರಿಗೆ ಸರಕಾರ ಎಷ್ಟೆಲ್ಲ ಯೋಜನೆಗಳನ್ನು ಜಾರಿಗೊಳಿಸಿದರೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ತ್ಯಾಜ್ಯ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅಷ್ಟೇ ಸತ್ಯ. ತಲಪಾಡಿಯಿಂದ ಆರಂಭಿಸಿ ಕಾಸರಗೋಡಿನ ವರೆಗೆ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ರಾಶಿ ನಾವೆಷ್ಟು ಜಾಗೃತರಾಗಿದ್ದೇವೆ ಎಂಬುದನ್ನು ಅಣಕಿಸುವಂತಿದೆ.

Advertisement

ಮುಂಗಾರು ನಿಧಾನವಾಗಿ ಆರಂಭಗೊಳ್ಳುತ್ತಿರುವಂತೆ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯಗಳ ದುಷ್ಪರಿಣಾಮ ಜನಜೀವನವನ್ನು ಬಾಧಿಸತೊಡಗಿದ್ದು, ಪ್ರಜ್ಞಾವಂತ ಜನ ಆಕ್ರೋಶಗೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮಂಗಲ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಉಪ್ಪಳ ಪೇಟೆ ಮುಂಚೂಣಿಯಲ್ಲಿದೆ. ಜನಸಾಂದ್ರತೆಯ ದೃಷ್ಟಿಯಿಂದಲೂ ಉಪ್ಪಳ ಅತೀ ಹೆಚ್ಚು ಜನನಿಬಿಡ ಪ್ರದೇಶವಾಗಿದ್ದು, ವ್ಯಾಪಾರ ವಹಿವಾಟು ಸಹಿತ ಅತಿ ಹೆಚ್ಚಿನ ನಾಗರಿಕರು ಒಟ್ಟು ಸೇರುವ ಪ್ರದೇಶವಾಗಿ ಬೆಳೆಯುತ್ತಿದೆ. ಆದರೆ ಇದರ ಜತೆಗೆ ನೈರ್ಮಲ್ಯದಂತಹ ಚಟುವಟಿಕೆಗಳಲ್ಲಿ ಅತೀ ಹಿಂದುಳಿದು ಭಯದ ವಾತಾವರಣಕ್ಕೆ ಕಾರಣವಾಗಿದೆ.

ಪ್ರಸ್ತುತ ಉಪ್ಪಳ ರೈಲು ನಿಲ್ದಾಣ ಪರಿಸರದಲ್ಲಿರುವ ರೈಲ್ವೇ ವಿದ್ಯುತ್‌ ಸಬ್‌ ಸ್ಟೇಶನ್‌ ಬಳಿ ಬೃಹತ್‌ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ತಂದು ಸುರಿದಿರುವುದರ ಪರಿಣಾಮ ಮಳೆ ನೀರಿನಿಂದ ಕೊಳೆತು ಇದೀಗ ದುರ್ವಾಸನೆ ಬೀರತೊಡಗಿದೆ. ನೂರಾರು ಜನರು ಓಡಾಡುವ ಪರಿಸರದಲ್ಲಿ ತ್ಯಾಜ್ಯಗಳ ಕೊಳೆಯುವಿಕೆಯಿಂದ ಉಂಟಾದ ದುರ್ವಾಸನೆಯ ಕಾರಣ ಮೂಗುಮುಚ್ಚಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು ಓಡಾಡುವ ಈ ಪರಿಸರದಲ್ಲಿ ತ್ಯಾಜ್ಯಗಳ ರಾಶಿಯಿಂದ ಹೊರಬಿದ್ದ ಕಬ್ಬಿಣದ ಚೂರು, ಗಾಜುಗಳಿಂದ ಘಾಸಿಗೊಂಡು ಈಗಾಗಲೇ ಹತ್ತಕ್ಕಿಂತಲೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸಾಂಕ್ರಾಮಿಕ ಕಾಯಿಲೆ ಭೀತಿ

ಉಪ್ಪಳ ಪರಿಸರದಲ್ಲಿ ಈಗಾಗಲೇ ಹಲವೆಡೆ ಸಾಂಕ್ರಾಮಿಕ ಕಾಯಿಲೆಗಳು ಕಂಡುಬಂದಿದ್ದು, ಕಳೆದೊಂದು ವಾರದಲ್ಲಿ ಕೆಮ್ಮು, ಜ್ವರ, ತುರಿಕೆಗಳಿಗೆಂದು ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿ ಚಿಕಿತ್ಸೆಗೆ ಆಗಮಿಸಿರುವುದಾಗಿ ತಿಳಿದುಬಂದಿದೆ. ಮಿಕ್ಕುಳಿದಂತೆ ಖಾಸಗಿ ಲೆಕ್ಕಾಚಾರಗಳು ಲಭ್ಯವಾಗದಿರುವುದರಿಂದ ಇದು 500ಕ್ಕಿಂತಲೂ ಹೆಚ್ಚು ಮಂದಿಗಳಲ್ಲಿ ಕಂಡುಬಂದಿರ ಬಹುದೆಂದು ಅಂದಾಜಿಸಲಾಗಿದೆ. ಜತೆಗೆ ಮಲೇರಿಯಾ, ಡೆಂಗ್ಯೂ, ಪಿತ್ತಕಾಮಾಲೆ, ಇಲಿಜ್ವರಗಳ ಭೀತಿ ಎದುರಾ ಗಿದ್ದು, ಕೆಲವರಲ್ಲಿ ಇದರ ಲಕ್ಷಣ ಕಂಡುಬಂದಿದೆ.
ಎರಡನೇ ಮಾಲಿನ್ಯ ಪ್ಲಾಂಟ್

ಮಾಲಿನ್ಯ ಸಂಸ್ಕರಣೆಗಾಗಿ ಜಾರಿಗೊಳಿಸಿರುವ ಮಾಲಿನ್ಯ ಸಂಸ್ಕರಣಾ ಪ್ಲಾಂಟ್‌ಗಳ ಪೈಕಿ ರಾಜ್ಯದ ಎರಡು ಗ್ರಾಮ ಪಂಚಾಯತ್‌ಗಳ ಪೈಕಿ ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಕೂಡ ಒಂದೆಂಬುದು ವಿಶೇಷ. ಆದರೆ ಮಾಲಿನ್ಯ ಸಂಸ್ಕರಣ ಪ್ಲಾಂಟ್ ಇದ್ದರೂ ಉಪ್ಪಳದಲ್ಲಿರುವಷ್ಟು ಮಾಲಿನ್ಯ ರಾಶಿ ಜಿಲ್ಲೆಯ ಇತರೆಡೆಗಳಲ್ಲಿ ಕಾಣಿಸದೆಂಬುದೂ ಆಶ್ಚರ್ಯಕರವಾದ ಸತ್ಯವೂ ಹೌದು.
Advertisement

Udayavani is now on Telegram. Click here to join our channel and stay updated with the latest news.

Next