Advertisement

ಸರ ಮುಚ್ಚಿಡಲು ಸ್ಕಾರ್ಫ್ ವಿತರಣೆ

10:49 AM May 03, 2018 | |

ಬೆಂಗಳೂರು: ಪಶ್ಚಿಮ ವಲಯದಲ್ಲಿ ಹೆಚ್ಚುತ್ತಿರುವ ಸರ ಕಳವು ಪ್ರಕರಣಗಳಿಂದ ಎಚ್ಚೆತ್ತ ಪೊಲೀಸರು ಚಿನ್ನಾಭರಣ ಧರಿಸಿ ಓಡಾಡುವ ಮಹಿಳೆಯರಿಗೆ ಕುತ್ತಿಗೆಗೆ ಧರಿಸುವ ಸ್ಕಾರ್ಫ್ ವಿತರಿಸಲು ಮುಂದಾಗಿದ್ದಾರೆ . 

Advertisement

ಚಿಕ್ಕಪೇಟೆ ಎಸಿಪಿ ನಿರಂಜನ್‌ ಅರಸ್‌ ಮತ್ತು ಉಪ್ಪಾರ ಪೇಟೆ ಪಿಐ ಉಮಾ ಮಹೇಶ್‌ ನೇತೃತ್ವದಲ್ಲಿ ಸ್ಕಾರ್ಫ್ ಸಿದ್ಧಪಡಿಸಲಾಗಿದೆ. ಸರ ಕಳವು ಹೆಚ್ಚಿರುವ ಜ್ಞಾನ ಭಾರತಿ, ಅನ್ನಪೂರ್ಣೇಶ್ವರಿ  ನಗರ, ಚಂದ್ರ ಲೇಔಟ್‌, ಕೆಂಗೇರಿ ಹಾಗೂ ಇತರೆ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರು ಹಾಗೂ ಚಿನ್ನಾ ಭರಣ ಧರಿಸಿ ಓಡಾಡುವ ಮಹಿಳೆಯರಿಗೆ ಸುಮಾರು 2 ಸಾವಿರ ಸ್ಕಾರ್ಫ್ ವಿತರಣೆ ಮಾಡಲಾಗುತ್ತದೆ.ಈ ಸ್ಕಾರ್ಫ್ ನಲ್ಲಿ ಬೆಂಗಳೂರು ನಗರ ಪೊಲೀಸರು, ಪಶ್ಚಿಮ ವಿಭಾಗ ಎಂದು ಮುದ್ರಿಸಲಾಗಿದೆ ಎಂದು ಡಿಸಿಪಿ ರವಿ ಡಿ. ಚನ್ನಣ್ಣನವರ್‌ ಹೇಳಿದ್ದಾರೆ.

ಸರಗಳ್ಳನ ಬಂಧನ: ಒಂಟಿ ಮಹಿಳೆಯರ ಸರ ಕಳವು ಮಾಡುತ್ತಿದ್ದ ಕುಖ್ಯಾತ ಸರ ಅಪಹರಣಕಾರ ಪಲ್ಸರ್‌ ಬಾಬು ಸಹಚರ ಕೊನೆಗೂ ಪೊಲೀಸರ ಬಲೆಗೆಬಿದಿದ್ದಾನೆ.

ಸಂತೋಷ್‌ (34) ಬಂಧಿತ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಒಂಟಿ  ಮಹಿಳೆಯರು ಹಾಗೂ ಮನೆ ಮುಂದೆ ರಂಗೋಲಿ
ಹಾಕುತ್ತಿದ್ದ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ತುಮಕೂರು ಮೂಲದ ಸಂತೋಷ್‌, ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದು, ಯಾವುದೇ ಕೆಲಸಸಿಗದೆ ಕುಖ್ಯಾತ  ಸರ ಅಪಹರಣಕಾರ ಪಲ್ಸರ್‌ ಬಾಬು ಜತೆ ಸೇರಿ ಸರ ಕದಿಯುತ್ತಿದ್ದ. ಒಂದೂವರೆ ವರ್ಷದ ಹಿಂದೆ ಪೊಲೀಸರು ಬಾಬುನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸಂತೋಷ್‌ ತಲೆಮರೆಸಿ ಕೊಂಡಿದ್ದ.

ಇತ್ತೀಚೆಗೆ ಪಶ್ಚಿಮ ವಲಯ ವಿಭಾಗದಲ್ಲಿ ಸರ ಅಪಹರಣ  ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ ಎಂದು ಪಶ್ಚಿಮ ವಿಭಾಗದಡಿ ಸಿಪಿ ರವಿ ಡಿ. ಚನ್ನಣ್ಣ ನವರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಮನೆ ಮಾಲೀಕರಿಗೇ ಮಾರಾಟ
ಆರೋಪಿ ನಗರದ ಹತ್ತಾರು ಬಡಾವಣೆಗಳಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಈ ವೇಳೆ ಕಳವು ಮಾಡುತ್ತಿದ್ದ ಚಿನ್ನ ದ ಸರಗಳನ್ನು ಹಣದ ಅಭಾವವಿದೆ ಎಂದು ಹೇಳಿ ಮನೆ ಮಾಲೀಕರಿಗೇ ಮಾರಾಟ ಮಾಡುತ್ತಿದ್ದ. ಒಂದು ವೇಳೆ ಖರೀದಿಗೆ ಹಿಂದೇಟು ಹಾಕಿದರೆ, ನನ್ನ ತಾಯಿ, ಪತ್ನಿ, ಮಕ್ಕಳು ಹಾಗೂ ಸಂಬಂಧಿಗಳಿಗೆ ಅನಾರೋಗ್ಯ ಎಂದು ಸುಳ್ಳು ಹೇಳಿ ಮಾರುತ್ತಿದ್ದ

ಕಳವು ಮಾಲು ಎಂದು ತಿಳಿಯದ ಮಾಲೀಕರು ಖರೀದಿಸುತ್ತಿದ್ದರು. ಅನಂತರ ಒಂದೆರಡು ದಿನ ಅಲ್ಲೇ ಇದ್ದು, ಏಕಾಏಕಿ ಮನೆ ಖಾಲಿ ಮಾಡಿ ಪರಾರಿಯಾಗುತ್ತಿದ್ದ. ಈ ರೀತಿ ಹಣಗಳಿಸಿ ಮೋಜು-ಮಸ್ತಿ ಜೀವನ ನಡೆಸುತ್ತಿದ್ದ. ಹೀಗಾಗಿ ಅವನು ವಾಸವಿದ್ದ ಕೆಲ ಮನೆಗಳ ಮಾಲೀಕರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

6 ಜನ ಚಿನ್ನಾಭರಣ ಕಳ್ಳರ ಸೆರೆ 
ರಾತ್ರಿ ಕನ್ನ ಕಳವು ಮತ್ತು ಬಸ್‌ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದಿಯುತ್ತಿದ್ದ ಆರು ಮಂದಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಮಂಜ ಅಲಿಯಾಸ್‌ ತಿಟ್‌ ಮಂಜ (32), ಮಂಜು ಳಾ (35), ನಾಗಮ್ಮ (40), ವೆಂಕಟೇಶ್‌ (45), ರಾಕೇಶ್‌ (24) ಮತ್ತು ಭಿಯಾರಾಮ್‌ (25) ಬಂಧಿತರು. ಆರೋಪಿಗಳು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹತ್ತಿ, ತಮ್ಮ ಮಕ್ಕಳನ್ನು ಮಹಿಳಾ ಹಾಗೂ ಪುರುಷ ಪ್ರಯಾಣಿಕರ ಪಕ್ಕಕೂರಿಸಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಪರ್ಸ್‌, ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇವರ ಬಂಧನದಿಂದ 23 ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳಿಂದ 32 ಲಕ್ಷ ರೂ. ಮೌಲ್ಯದ 1.017 ಕೆ.ಜಿ. ಚಿನ್ನ, 1.250 ಕೆ.ಜಿ. ಬೆಳ್ಳಿವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next