Advertisement

ಜಲಕ್ಷಾಮ

11:20 AM Jan 11, 2019 | |

ಗಜೇಂದ್ರಗಡ: ಪಟ್ಟಣದಲ್ಲಿ ಬೇಸಿಗೆಗೂ ಮುನ್ನವೇ ಜಲ ಕ್ಷಾಮ ಎದುರಾಗಿದೆ. ಈ ಹಿಂದೆ 10 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರು ಇದೀಗ 20 ದಿನಕ್ಕೆ ತಲುಪಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

Advertisement

ಕೋಟೆ ಕೊತ್ತಲುಗಳ ನಾಡು ಎಂದೇ ಖ್ಯಾತಿ ಪಡೆದ ಗಜೇಂದ್ರಗಡದಲ್ಲಿ ಜೀವ ಜಲಕ್ಕಾಗಿ ಕಳೆದ ಮೂರು ತಿಂಗಳ ಹಿಂದೆ ಜನರು ಜಗಳ ಮಾಡುವ ದುಸ್ಥಿತಿ ಎದುರಾಗಿತ್ತು. ನೀರಿನ ಬವಣೆ ಕಂಡರಿಯದ ಈ ಭಾಗದ ಜನರು ಸಮಸ್ಯೆಯಿಂದ ಬಸವಳಿದು ನೀರಿಗಾಗಿ ನಿತ್ಯ ಪರದಾಡುವ ಅನಿವಾರ್ಯತೆ ಎದುರಾಗಿತ್ತು. ಆದರೆ ಪುರಸಭೆ ಅಧಿಕಾರಿಗಳು ಪಟ್ಟಣದೆಲ್ಲೆಡೆ ಕೊಳವೆಬಾವಿ ಕೊರೆಯಿಸಿ ನೀರು ಸಂಗ್ರಹಿಸಿ 10 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದರು. ಆದರೆ ಬರದ ಛಾಯೆಯಿಂದ ಇದೀಗ ಮತ್ತೆ 20 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿರುವುದು ಜನರನ್ನು ಚಿಂತೆಗೆ ಜಾರುವಂತೆ ಮಾಡಿದೆ. ಅಂತರ್ಜಲ ಕುಸಿದ ಪರಿಣಾಮ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ಪುರಸಭೆ ಪಟ್ಟಣದಲ್ಲಿ 8ರಿಂದ 10 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇದರಿಂದ ಜನರಿಗೆ ನೀರಿನ ಯಾವುದೇ ತೊಂದರೆ ಕಾಡಿರಲಿಲ್ಲ. ಆದರೆ ಪಟ್ಟಣದ ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಸಂಚಕಾರ ಎದುರಾಗಿದೆ. ಕುಡಿಯುವ ನೀರು ವ್ಯತ್ಯಯದಿಂದಾಗಿ ಎಲ್ಲ ಓಣಿಗಳ ನಿವಾಸಿಗಳು ಕೊಡ ಹಿಡಿದು ಅಲೆದಾಡುವುದು ಸಾಮಾನ್ಯವಾಗಿದೆ.

ಪಟ್ಟಣದ ಗುಡ್ಡದ ಕೆಳಭಾಗದಲ್ಲಿರುವ ವಾಜಪೇಯಿ ಬಡಾವಣೆಯಲ್ಲಿ 199 ಕುಟುಂಬಗಳು ವಾಸಿಸುತ್ತಿವೆ. ಅಲ್ಲಿನ ಜನರಿಗೆ ಇರುವುದು 8 ನಳಗಳು ಮಾತ್ರ. ನೀರು ಪೂರೈಕೆಯಾದ ಸಂದರ್ಭದಲ್ಲಿ ಪರಸ್ಪರ ಕಚ್ಚಾಡಿ ನೀರು ಪಡೆಯುವ ಸ್ಥಿತಿ ಉದ್ಭವಿಸಿದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಅನುಭವಿಸುತ್ತಿರುವ ಬಡಾವಣೆ ನಿವಾಸಿಗಳ ಆರ್ಥನಾದ ಕೇಳುವವರಿಲ್ಲದಂತಾಗಿದೆ.

ಕುಡಿಯುವ ನೀರಿಗಾಗಿ ನಿತ್ಯ ಒಂದಿಲ್ಲೊಂದು ವಾರ್ಡ್‌ಗಳ ನಿವಾಸಿಗಳು ಖಾಲಿ ಕೊಡ ಹಿಡಿದು ಪುರಸಭೆ ಮುಂದೆ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ. ಸಮರ್ಪಕ ನೀರು ಬಾರದಿದ್ದರೂ ಪ್ರತಿ ವರ್ಷ ಪುರಸಭೆಗೆ ನೀರಿನ ಕರ ಭರಿಸುವುದು ತಪ್ಪಿಲ್ಲ. ಹಣ ನೀಡಿ ಖಾಸಗಿಯವರಿಂದ ನೀರು ಹಾಕಿಸಿಕೊಳ್ಳುವುದು ತಪ್ಪ್ಪಿಲ್ಲ ಎಂದು ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ವಿವಿಧ ವಾರ್ಡ್‌ ಜತೆ ಹೊರ ವಲಯದಲ್ಲಿ ಪುರಸಭೆಯಿಂದ ಕೊರೆಸಿದ 63 ಕೊಳವೆ ಬಾವಿಗಳಲ್ಲಿ 33 ಕೊಳವೆ ಬಾವಿಗಳಲ್ಲಿ ಮಾತ್ರ ನಿತ್ಯ 6. 5 ಲಕ್ಷ ಲೀಟರ ನೀರು ಸಂಗ್ರಹವಾಗುತ್ತಿದೆ. ಹೀಗಾಗಿ ಪಟ್ಟಣದ 23 ವಾರ್ಡ್‌ಗಳಿಗೆ ಸಮರ್ಪಕ ನೀರು ಪೂರೈಸಲಾಗದಂತಾಗಿದೆ ಎನ್ನುವುದು ಅಧಿಕಾರಿಗಳ ಮಾತಾಗಿದೆ. ಪಟ್ಟಣದಲ್ಲಿನ ಜಲಕ್ಷಾಮವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಟ್ಯಾಂಕರ್‌ ನೀರು ಸರಬರಾಜುದಾರರು 300ರಿಂದ 350 ರುಪಾಯಿ ನೀಡಿದರೂ ಸಮಯಕ್ಕೆ ಸರಿಯಾಗಿ ನೀರು ತರದೇ ಸತಾಯಿಸುತ್ತಾರೆ. ಹೀಗಾಗಿ ಟ್ಯಾಂಕರ್‌ ನೀರು ಸರಬರಾಜುದಾರರಿಗೆ ಈಗ ಬಹಳಷ್ಟು ಬೇಡಿಕೆ ಬಂದಿದೆ.

Advertisement

ಪಟ್ಟಣದಲ್ಲಿ ಪುರಸಭೆ 20 ದಿನಕ್ಕೊಮ್ಮೆ ನೀರು ಪೂರೈಸುತ್ತಿದೆ. ನೀರು ಶೇಖರಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಯಾವ ಬಡಾವಣೆಯಲ್ಲಿ ನೀರು ಬಿಡುತ್ತಾರೋ ಅಲ್ಲಿ ನಿತ್ಯ ಕೊಡ ಹಿಡಿದು ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
•ಯಲ್ಲವ್ವ ಬಂಡಿವಡ್ಡರ

ಪಟ್ಟಣದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯುವುದರ ಜತೆಗೆ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಕುರಿತು ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಜಿಲ್ಲಾಡಳಿತ ನಿರ್ದೇಶಿಸಿದ್ದು, ಸಮರ್ಪಕ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ಹನಮಂತಮ್ಮ ನಾಯಕ,
ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next