Advertisement

ಶ್ರೀನಾಥ್‌ ಜೊತೆಯಲ್ಲೀ, ನೆನಪಿನ ದೋಣಿಯಲ್ಲೀ…

03:51 PM Feb 11, 2017 | |

ಕನ್ನಡ ಚಿತ್ರರಂಗದಲ್ಲಿ ಬಹುಶಃ ಡಾ ರಾಜಕುಮಾರ್‌ ಮತ್ತು ವಿಷ್ಣುವರ್ಧನ್‌ ಅವರನ್ನು ಹೊರತುಪಡಿಸಿದರೆ, ಅಷ್ಟೊಂದು ಸಂಖ್ಯೆಯ ಜನಪ್ರಿಯ ಹಾಡುಗಳು ಇರುವುದು ಹಿರಿಯ ನಟ ಶ್ರೀನಾಥ್‌ ಅವರಿಗೇ ಏನೋ. ಶ್ರೀನಾಥ್‌ ಅವರ ಹಿಟ್‌ ಹಾಡುಗಳಲ್ಲಿ ಮೊದಲಿಗೆ ನೆನಪಿಗೆ ಬರುವುದು, “ನಾ ಮೆಚ್ಚಿದ ಹುಡುಗ’ ಚಿತ್ರದ “ಬೆಳದಿಂಗಳಿನಾ ನೊರೆ ಹಾಲು …’ ಹಾಡು. ಅಲ್ಲಿಂದ ಶುರುವಾಗವ ಅವರ ಮಧುರ ಹಾಡುಗಳ ಪಯಣ, ನಂತರ ಅದೆಷ್ಟೋ ಚಿತ್ರಗಳಲ್ಲಿ ಮುಂದುವರೆದಿದೆ. ಕನ್ನಡ ಚಿತ್ರರಂಗದಲ್ಲಿ ಇನ್ನೇನು 50ನೇ ವರ್ಷವನ್ನು ಮುಗಸಲಿರುವ ಶ್ರೀನಾಥ್‌ ಅವರ ಬೆಳ್ಳಿತೆರೆಯ ಸುವರ್ಣ ಬೆಸುಗೆಯನ್ನು ಹಾಡುಗಳ ಮೂಲಕ ಆಚರಿಸುವುದಕ್ಕೆ ಕಲಾನಮನ ಸಾಂಸ್ಕೃತಿಕ ಪ್ರತಿಷ್ಠನವು ಹೊರಟಿದೆ. ಈ ಗೀತ ಸಂಭ್ರಮ ಇಂದು ಸಂಜೆ ಐದಕ್ಕೆ ಬಸವನಗುಡಿಯ ಬ್ಯೂಗಲ್‌ರಾಕ್‌ ಉದ್ಯಾನವನದಲ್ಲಿ ನಡೆಯಲಿದೆ. ಶ್ರೀನಾಥ್‌ ಅವರ ಜೊತೆಗೇ ಕುಳಿತು ಅವರದೇ ಜನಪ್ರಿಯ ಹಾಡುಗಳನ್ನು ಕೇಳುವ ಆಸೆ ಇದ್ದರೆ, ತಪ್ಪದೆ ಬನ್ನಿ …

Advertisement

“ವಸಂತ ಬರೆದನು ಒಲವಿನ ಓಲೆ …’, “ಹೂವೊಂದು ಬಳಿ ಬಂದು …’ “ಯಾವ ಹೂವು ಯಾರ ಮುಡಿಗೊಅà …’, “ಬೆಸುಗೆ ಬೆಸುಗೆ …’, “ಸ್ನೇಹದ ಕಡಲಲ್ಲಿ …’, “ಮಾನಸ ಸರೋವರ …’, “ನೀ ಇರಲು ಜೊತೆಯಲ್ಲಿ …’, “ಆಕಾಶ ದೀಪವು ನೀನು …’, “ನಾಕೊಂದ್ಲ ನಾಕು …’

ಶ್ರೀನಾಥ್‌ ಎಂದಾಕ್ಷಣ ಇಂತಹ ಹತ್ತು ಹಲವು ಹಾಡುಗಳನ್ನು ಕಣ್ಣುಗಳ ಮುಂದೆ ಬರುತ್ತದೆ, ಕಿವಿ ಇಂಪಾಗಿಸುತ್ತವೆ. ಇಂತಹ ಹಾಡುಗಳನ್ನು ಮತ್ತೂಮ್ಮೆ ಕೇಳಬೇಕು ಎಂದೇನಾದರೂ ಆಸೆ ಇದ್ದರೆ, ನೀವಿವತ್ತು ಸಂಜೆ ಬಸವನಗುಡಿಯಲ್ಲಿರುವ ಬ್ಯೂಗಲ್‌ ರಾಕ್‌ ಉದ್ಯಾನವನಕ್ಕೆ ಬರಬೇಕು. ಅಲ್ಲಿ ಖುದ್ದು ಶ್ರೀನಾಥ್‌ ಇರುತ್ತಾರೆ. ಅವರೆದುರು, ಅವರದೇ ಚಿತ್ರಗಳ ಸುಮಧುರ ಹಾಡುಗಳು ಮೊಳಗುತ್ತಲಿರುತ್ತವೆ. ಶ್ರೀನಾಥ್‌ ಮತ್ತು ಅವರ ಹಾಡುಗಳ ಜೊತೆಗೆ ಒಂದು ಸುಂದರ ಸಂಜೆಯನ್ನು ಕಳೆಯುವುದಕ್ಕೆ ಕಲಾನಮನ ಸಾಂಸ್ಕೃತಿಕ ಪ್ರತಿಷ್ಠಾನವು ಒಂದು ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

ಈಗ್ಯಾಕೆ ಶ್ರೀನಾಥ್‌ ಅವರ ಹಾಡುಗಳ ಗುಂಗು ಎಂಬ ಪ್ರಶ್ನೆಗೂ ಉತ್ತರವಿದೆ. ಶ್ರೀನಾಥ್‌ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು “ಲಗ್ನ ಪತ್ರಿಕೆ’ ಚಿತ್ರದಲ್ಲಿ. ಆ ಚಿತ್ರ ಬಿಡುಗಡೆಯಾಗಿ ಇನ್ನೇನು 50 ವರ್ಷಗಳಾಗಲಿವೆ. ಅಷ್ಟೇ ಅಲ್ಲ, ಶ್ರೀನಾಥ್‌ ಅವರ ಚಿತ್ರಜೀವನಕ್ಕೂ ಹಾಫ್ ಸೆಂಚ್ಯುರಿಯಾಗಲಿದೆ. ಶ್ರೀನಾಥ್‌ ಮತ್ತು ಚಿತ್ರರಂಗದ ನಡುವಿನ ಈ ಸುವರ್ಣ ಬೆಸುಗೆಯನ್ನು ಮೆಲುಕು ಹಾಕುವುದಕ್ಕೆಂದೇ, ಕಲಾನಮನ ತಂಡವು ಒಂದು ಗಾಯನ ಸಂಜೆಯನ್ನು ಆಯೋಜಿಸಿದೆ. ಈ ಗಾಯನ ಸಂಜೆಯಲ್ಲಿ ಶ್ರೀನಾಥ್‌ ಅವರ 25 ಸುಮಧುರ ಹಾಡುಗಳನ್ನು ಹಾಡಲಾಗುತ್ತದೆ. ಈ ಪೈಕಿ ನಾಲ್ಕು ಸೋಲೋಗಳು, ಮಿಕ್ಕಂತೆ ಅವರ ಜನಪ್ರಿಯ ಡ್ಯುಯೆಟ್‌ಗಳನ್ನು ಹಾಡಿ ರಂಜಿಸಲಾಗುತ್ತದೆ. ಅಷ್ಟೇ ಅಲ್ಲ, ಇದೇ ಸಂದರ್ಭದಲ್ಲಿ ಶ್ರೀನಾಥ್‌ ಅವರಿಗೆ ಪ್ರೀತಿಯ ಸನ್ಮಾನವೂ ಇರಲಿದೆ.

ಇಂಥದ್ದೊಂದು ಕಾರ್ಯಕ್ರಮವನ್ನು ಇನ್ನೂ ದೊಡ್ಡ ಜಾಗದಲ್ಲಿ ಆಯೋಜಿಸಬಹುದು ಎಂದನಿಸದೇ ಇರಬಹುದು. ಆದರೆ, ಬಸವನಗುಡಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದಕ್ಕೂ ಒಂದು ಕಾರಣವಿದೆ. ಚಿತ್ರರಂಗಕ್ಕೂ ಮತ್ತು ಶ್ರೀನಾಥ್‌ಗೂ ಸುಮಾರು 50 ವರ್ಷಗಳ ಬೆಸುಗೆಯಾದರೆ, ಶ್ರೀನಾಥ್‌ ಅವರಿಗೂ ಬಸವನಗುಡಿಗೂ ಇರುವ ಬೆಸುಗೆ ಇನ್ನೂ ಹಳೆಯದು. ಬಸವನಗುಡಿಯಲ್ಲಿಯೇ ತಮ್ಮ ಬಾಲ್ಯವನ್ನು ಕಳೆದ ಶ್ರೀನಾಥ್‌, ಅಲ್ಲಿಯೇ ಬೆಳೆದವು. ಈಗಲೂ ಬಸವನಗುಡಿಯ ನಿವಾಸಿಯಾಗಿರುವ ಅವರಿಗೆ, ಬಸವನಗುಡಿಯ ಒಂದು ಜನಪ್ರಿಯ ಸ್ಥಳದಲ್ಲಿ ಸನ್ಮಾನಿಸಬೇಕು ಎಂದು ಕಲಾನಮನದ ಉದ್ದೇಶ. ಅದೇ ಕಾರಣಕ್ಕೆ ಬಸವನಗುಡಿಯಲ್ಲೇ ಸುವರ್ಣ ಸಂಭ್ರಮದ ಸನ್ಮಾನ ನಡೆಯಲಿದೆ.

Advertisement

ಇನ್ನು ಈ ಕಾರ್ಯಕ್ರಮದಲ್ಲಿ ಶ್ರೀನಾಥ್‌ ಅವರ ಜೊತೆಗೆ ಹಿರಿಯ ಕವಿಗಳಾದ ಎಂ.ಎನ್‌. ವ್ಯಾಸರಾವ್‌, ಬಿ.ಆರ್‌. ಲಕ್ಷ್ಮಣ ರಾವ್‌, ನಟಿ ಪದ್ಮಾವಾಸಂತಿ, ಶಾಸಕ ರವಿಸುಬ್ರಹ್ಮಣ್ಯ, ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ್‌ ಮುಂತಾದವರು ಇರಲಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹಿರಿಯ ಪತ್ರಕರ್ತ ಎನ್‌.ಎಸ್‌. ಶ್ರೀಧರಮೂರ್ತಿ ಹೊತ್ತರೆ, ನಾಗಚಂದ್ರಿಕಾ ಭಟ್‌, ಶ್ರೀನಿವಾಸಮೂರ್ತಿ, ರಘು, ದಾಕ್ಷಾಯಿಣಿ ಮುಂತಾದವರು ಹಾಡಲಿದ್ದಾರೆ. ಇನ್ನು ಅವರಿಗೆ ವಾದ್ಯಗಳಲ್ಲಿ ಜಯರಾಮ್‌, ಸೃಷ್ಠಿ ಉಮೇಶ್‌, ವಸಂತಕುಮಾರ್‌, ಪ್ರೀತಮ್‌ ಹಳಿಬಂಡಿ ಮುಂತಾದವರು ಸಾಥ್‌ ಕೊಡಲಿದ್ದಾರೆ.

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next