Advertisement

ಮಕ್ಕಳ ಕೈ-ಕಾಲುಗಳ ಕಜ್ಜಿ ಸಮಸ್ಯೆ ಈ ವರ್ಷ ಅಧಿಕ

12:19 AM Dec 17, 2021 | Team Udayavani |

ಬಂಟ್ವಾಳ: ನವೆಂಬರ್‌-ಡಿಸೆಂಬರ್‌ ಅವಧಿಯಲ್ಲಿ ಸಣ್ಣ ಮಕ್ಕಳ ಕಾಲು, ಕೈ, ಬಾಯಿಯಲ್ಲಿ ಕಜ್ಜಿಗಳು ಬೀಳುವ ಮತ್ತು ಅದರಿಂದಾಗಿ ಕೆಲವೊಮ್ಮೆ ಜ್ವರ ಬಾಧಿಸುವುದು ಸಾಮಾನ್ಯ. ಆದರೆ ಈ ವರ್ಷ ಅದರ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ಹವಾಮಾನ ವೈಪರೀತ್ಯ ಅಥವಾ ಒಂದೂವರೆ ವರ್ಷದಿಂದ ಮನೆಯೊಳಗೆ ಕುಳಿತು ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ.

Advertisement

ಫೂಟ್‌ ಆ್ಯಂಡ್‌ ಮೌತ್‌ ಡಿಸೀಸ್‌ (ಕಾಲುಬಾಯಿ ಜ್ವರ) ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲ್ಪಡುವ ಈ ಕಾಯಿಲೆ ಈ ವರ್ಷ ಹೆಚ್ಚಾಗಿರುವುದನ್ನು ಖಾಸಗಿ ವೈದ್ಯರು ದೃಢಪಡಿಸಿದ್ದಾರೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇದು ವೇಗವಾಗಿ ಹರಡುವಂಥ ಕಾಯಿಲೆ ಯಾಗಿದ್ದರೂ ಆತಂಕ ಪಡುವಂಥದ್ದಲ್ಲ. ಕಜ್ಜಿ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ನೀಡಿದರೆ ನಾಲ್ಕೈದು ದಿನಗಳಲ್ಲಿ ಗುಣವಾಗುತ್ತದೆ. ಇಲ್ಲವಾದಲ್ಲಿ ಜ್ವರ ಬಾಧಿಸುವ ಸಾಧ್ಯತೆ ಇರುತ್ತದೆ. ಗ್ರಾಮೀಣ ಭಾಗಗಳಲ್ಲಿ ಇಂತಹ ಕಜ್ಜಿಗಳನ್ನು ಕಂಡಾಗ ನಾಟಿ ವೈದ್ಯರಲ್ಲಿಗೆ ತೆರಳುವುದು, ಗುಣ ವಾಗದಿದ್ದರೆ ವಿಳಂಬವಾಗಿ ವೈದ್ಯರಲ್ಲಿಗೆ ಬರುವುದರಿಂದಲೂ ಅದು ಉಲ್ಬಣಿಸುವ ಸಾಧ್ಯತೆ ಇರುತ್ತದೆ.

ಈ ಬಗ್ಗೆ ಮಕ್ಕಳ ತಜ್ಞರ ಬಳಿ ಮಾತನಾಡಿದಾಗ ಬಂಟ್ವಾಳ, ಬೆಳ್ತಂಗಡಿ ಭಾಗದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಗಂಟಲಲ್ಲಿ ಹೆಚ್ಚಿನ ಗುಳ್ಳೆಗಳು ಕಾಣಿಸಿಕೊಂಡ ಕಾರಣ ಮಗುವೊಂದು ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣವೂ ಇದೆ. ಉಡುಪಿಯ ಕುಂದಾಪುರದಲ್ಲಿಯೂ ಹಲವು ಪ್ರಕರಣಗಳಿಗೆ ಚಿಕಿತ್ಸೆ ನೀಡಿರುವುದಾಗಿ ವೈದ್ಯರೊಬ್ಬರು ತಿಳಿಸಿದ್ದಾರೆ.

ವೈದ್ಯರ ಸಲಹೆ:

Advertisement

ಆಯುರ್ವೇದ ವೈದ್ಯರ ಪ್ರಕಾರ, ಸಸ್ಯಾಹಾರ ಸೇವಿಸಿ ಬಿಸಿ ನೀರು ಕುಡಿಯುತ್ತಿದ್ದರೆ ಕಾಲುಬಾಯಿ ಜ್ವರದಿಂದ ರಕ್ಷಿಸಿಕೊಳ್ಳಬಹುದು. ಕಹಿಬೇವು ಸೊಪ್ಪಿನ ರಸದ ಜತೆಗೆ ವೈದ್ಯರು ಸಲಹೆ ನೀಡುವ ಚೂರ್ಣವನ್ನು ಹಚ್ಚಿದರೆ ಕಜ್ಜಿಗಳಿಗೆ ಮುಕ್ತಿ ಸಿಗುತ್ತದೆ. ಇದರಲ್ಲಿ ಜ್ವರವೂ ಕಾಣಿಸಿಕೊಳ್ಳುತ್ತಿದ್ದು, ಸಾಮಾನ್ಯ ಮಾತ್ರೆಗಳನ್ನು ಸೇವಿಸಿದರೆ ಜ್ವರ ದೂರವಾಗುತ್ತದೆ.

ಅಲೋಪತಿ ವೈದ್ಯರ ಪ್ರಕಾರ, ಕಜ್ಜಿ ಕಾಣಿಸಿಕೊಂಡ ತತ್‌ಕ್ಷಣ ವೈದ್ಯರ ಸಲಹೆ ಪಡೆದು ಮುಲಾಮು ಹಚ್ಚಿದರೆ ಗುಣವಾಗುತ್ತದೆ. ಒಂದೆರಡು ದಿನ ನೋವು ಕೂಡ ಇರುವುದರಿಂದ ನೋವಿನ ಮಾತ್ರೆಯನ್ನೂ ಸಲಹೆ ಮಾಡುತ್ತೇವೆ ಎಂದು ಹೇಳುತ್ತಾರೆ.

ಸರಕಾರದ ಗಮನಕ್ಕಿಲ್ಲ:

ಮಕ್ಕಳಲ್ಲಿ ಕಾಲುಬಾಯಿ ಜ್ವರ ಹೆಚ್ಚಾಗಿರುವ ಕುರಿತು ಸರಕಾರದ ಯಾವುದೇ ಅಧಿಕಾರಿಯ ಬಳಿ ಕೇಳಿದರೂ ಅಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಹೇಳುತ್ತಾರೆ. ಅಂದರೆ ಖಾಸಗಿ ವೈದ್ಯರು ಸರಕಾರಕ್ಕೆ ಮಾಹಿತಿ ನೀಡದೆ ಇರುವುದರಿಂದಲೂ ಹೀಗಾಗಿರುವ ಸಾಧ್ಯತೆ ಇದೆ.

ಜಾನುವಾರುಗಳ ಕಾಯಿಲೆ ಬೇರೆ:

ಜಾನುವಾರುಗಳಲ್ಲೂ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಇದಕ್ಕೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರ  ಸಂಬಂಧವಿದೆಯೇ ಎಂಬ ಸಂಶಯ ಮೂಡ ಬಹುದು. ಆದರೆ ಪಶುಸಂಗೋಪನೆ ಇಲಾಖೆಯ ತಜ್ಞರ ಪ್ರಕಾರ ಜಾನುವಾರುಗಳಲ್ಲಿ ಗೊರಸು ಇರುವ ಪ್ರಾಣಿಗಳಲ್ಲಿ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅದು ಯಾರಿಗೂ ಹರಡುವುದಿಲ್ಲ ಎನ್ನುತ್ತಾರೆ.

ಮಕ್ಕಳಲ್ಲಿ ಈ ರೀತಿಯ ಕಾಯಿಲೆ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ. ಖಾಸಗಿ ವೈದ್ಯರಲ್ಲಿಗೆ ಇಂತಹ ಪ್ರಕರಣಗಳು ಹೆಚ್ಚಾಗಿ ಬಂದಿದ್ದರೆ ಅದನ್ನು ನಮ್ಮ ಗಮನಕ್ಕೆ ತರಬೇಕು. ಇದೊಂದು ಹರಡುವ ಕಾಯಿಲೆಯಾಗಿದ್ದು, ಇಲಾಖೆಯ ಗಮನಕ್ಕೆ ಬಂದಾಗ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅನುಕೂಲವಾಗುತ್ತದೆ.ಡಾ| ರಾಜೇಶ್‌, ದ.ಕ. ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ

ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಇಲಾಖೆ ಸನ್ನದ್ಧವಾಗಿದೆ. ಆದರೆ ಇಂತಹ ಪ್ರಕರಣಗಳು ಉಡುಪಿಯಲ್ಲಿ ಈ ತನಕ ನಮ್ಮ ಗಮನಕ್ಕೆ ಬಂದಿಲ್ಲ.ಡಾ| ನಾಗಭೂಷಣ್‌ ಉಡುಪ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next