ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಅಲ್ಲದೆ, ಬಂಧನ ವಾರಂಟ್ ಹಾಗೂ ಸಿಬಿಐ ಕಸ್ಟಡಿಗೆ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನೂ ನ್ಯಾಯಮೂರ್ತಿ ಆರ್ ಭಾನುಮತಿ ನೇತೃತ್ವದ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಲಿದೆ. ಈ ಮಧ್ಯೆಯೇ, ಏರ್‌ಸೆಲ್ ಮ್ಯಾಕ್ಸಿಸ್ ಒಪ್ಪಂದ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಒದಗಿಸಿ ಶುಕ್ರವಾರವಷ್ಟೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಮೂರೂ ದಾವೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಪ್ರತಿಕ್ರಿಯೆಯನ್ನು ಬಯಸಿರುವ ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಿಗದಿಸಿದೆ. ಸುಪ್ರೀಂಕೋರ್ಟ್ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಚಿದಂಬರಂ ದೂರಿನಲ್ಲಿ ನಮೂದಿಸಿದ್ದಾರೆ. ಆಗಸ್ಟ್ 21 ರಂದು ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.