Advertisement

ಕರ್ನಾಟಕ ಸೇರಿ 6 ರಾಜ್ಯಗಳ ಗೃಹ ಕಾರ್ಯದರ್ಶಿಗಳಿಗೆ ಸುಪ್ರೀಂ ಸಮನ್ಸ್‌

03:45 AM Apr 18, 2017 | Team Udayavani |

– ಪೊಲೀಸ್‌ ಪಡೆಗಳಲ್ಲಿ ಹುದ್ದೆ ಭರ್ತಿಯಾಗದ್ದಕ್ಕೆ ಅಸಮಾಧಾನ
– 21ರಂದು ಮಾರ್ಗಸೂಚಿಯೊಂದಿಗೆ ಬರಲು ಸೂಚನೆ

Advertisement

ನವದೆಹಲಿ: ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಪೊಲೀಸ್‌ ಪಡೆಗಳಲ್ಲಿನ ಹುದ್ದೆಗಳು ಭರ್ತಿಯಾಗದೇ ಉಳಿದಿರುವುದಕ್ಕೆ ಸುಪ್ರೀಂಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಹುದ್ದೆ ಭರ್ತಿಗೆ ಸಂಬಂಧಿಸಿದ ಸ್ಪಷ್ಟ ಮಾರ್ಗಸೂಚಿಯೊಂದಿಗೆ ಮುಂದಿನವಾರ ನ್ಯಾಯಾಲಯದ ಮುಂದೆ ಹಾಜರಾಗುವಂತೆ, ಈ ಎಲ್ಲ ರಾಜ್ಯಗಳ ಗೃಹ ಕಾರ್ಯದರ್ಶಿಗಳಿಗೆ ಸಮನ್ಸ್‌ ಜಾರಿ ಮಾಡಿದೆ.

2013ರ ಅಂಕಿಅಂಶಗಳ ಪ್ರಕಾರ, ಕರ್ನಾಟಕ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್‌, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳ ಪೊಲೀಸ್‌ ಇಲಾಖೆಗಳಲ್ಲಿನ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಬಿಹಾರ ಮತ್ತು ಉತ್ತರಪ್ರದೇಶದಲ್ಲೇ ಕ್ರಮವಾಗಿ 40 ಸಾವಿರ ಮತ್ತು 1.5 ಲಕ್ಷ ಹುದ್ದೆಗಳು ಖಾಲಿಯಿವೆ. ಇವುಗಳನ್ನು ಭರ್ತಿ ಮಾಡಲು ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಹಾಗೂ ಮುಂದಿನ ವಿಚಾರಣೆ ವೇಳೆಗೆ ಆ ಮಾರ್ಗಸೂಚಿಯೊಂದಿಗೆ ಹಾಜರಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌ ನೇತೃತ್ವದ ಪೀಠ ಸೂಚಿಸಿದೆ.

ಆದಷ್ಟು ಬೇಗನೆ ಹುದ್ದೆಗಳನ್ನು ಭರ್ತಿಗೊಳಿಸಿ ಎಂದು  2013ರಿಂದಲೂ ನಾವು ಸೂಚಿಸುತ್ತಿದ್ದೇವೆ. ಆದರೆ, ಇನ್ನೂ ಆ ಕೆಲಸ ಪೂರ್ಣಗೊಂಡಿಲ್ಲ ಎಂದು ಪೀಠ ಇದೇ ವೇಳೆ ಅಸಮಾಧಾನ ಹೊರಹಾಕಿದೆ. ಏ.21ರಂದು ಮುಂದಿನ ವಿಚಾರಣೆ ನಡೆಯಲಿದೆ.

ಪೊಲೀಸ್‌ ಇಲಾಖೆಯಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಈವರೆಗೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಈ ಹಿಂದೆಯೇ ನ್ಯಾಯಾಲಯವು ಆಯಾ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ವಕೀಲರಲ್ಲಿ ಕೇಳಿತ್ತು. ಆದರೆ, ಅವರ ಪ್ರತಿಕ್ರಿಯೆಯು ತೃಪ್ತಿ ನೀಡದ ಕಾರಣ, ಈಗ ಗೃಹ ಕಾರ್ಯದರ್ಶಿಗಳಿಗೇ ಸಮನ್ಸ್‌ ಜಾರಿ ಮಾಡಿದೆ.

Advertisement

ಏಕೆ ಹೀಗೆ?: ವಿಚಾರಣೆಯ ಒಂದು ಹಂತದಲ್ಲಿ ಆಕ್ರೋಶಗೊಂಡ ನ್ಯಾಯಪೀಠ, “ನೀವೇಕೆ ಹೀಗೆ ಮಾಡುತ್ತೀರಿ’ ಎಂದು ಪ್ರಶ್ನಿಸಿತು. ಇದೇ ವೇಳೆ, “ನಾವು ಹುದ್ದೆ ಖಾಲಿಯಿವೆ ಎಂದು ಜಾಹೀರಾತು ನೀಡಿದ್ದೇವೆ’ ಎಂದು ತಮಿಳುನಾಡು ಪರ ವಕೀಲರು ಹೇಳಿದಾಗ, ಸಿಡಿಮಿಡಿಗೊಂಡ ಪೀಠ, “ಜಾಹೀರಾತು ನೀಡುವುದು ಮೊದಲ ಹಂತ. 2013ರಿಂದ ಇಂದಿನವರೆಗೂ ನೀವು ಮೊದಲ ಹಂತದಲ್ಲೇ ಇದ್ದೀರಾ?’ ಎಂದು ಖಾರವಾಗಿ ಪ್ರಶ್ನಿಸಿತು.

ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ?
ಉತ್ತರಪ್ರದೇಶ- 1.51 ಲಕ್ಷ
ಪಶ್ಚಿಮ ಬಂಗಾಳ- 37,325
ಕರ್ನಾಟಕ- 24,899
ಜಾರ್ಖಂಡ್‌- 26,303
ಬಿಹಾರ- 34,500
ತಮಿಳುನಾಡು- 19,803

Advertisement

Udayavani is now on Telegram. Click here to join our channel and stay updated with the latest news.

Next