ಹೊಸದಿಲ್ಲಿ : ನೀಟ್ ಪರೀಕ್ಷಾ ಫಲಿತಾಂಶಗಳ ಪ್ರಕಟನೆಯ ಮಾರ್ಗವನ್ನು ಸುಪ್ರೀಂ ಕೋರ್ಟ್ ಇಂದು ಸೋಮವಾರ ಸುಗಮಗೊಳಿಸಿದೆ.
ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳ ನೀಟ್ ಫಲಿತಾಂಶ ಪ್ರಕಟನೆಯನ್ನು ತಡೆದಿದ್ದ ಮದ್ರಾಸ್ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಅಂತೆಯೇ àಟ್ ಪರೀಕ್ಷಾ ಫಲಿತಾಂಶ ಪ್ರಕಟನೆ, ಅನಂತರದ ಕೌನ್ಸೆಲಂಗ್ ಪ್ರಕ್ರಿಯೆ ಮತ್ತು ಪ್ರವೇಶ ಪ್ರಕ್ರಿಯೆಯನ್ನು ಈ ಮೊದಲು ನಿಗದಿಯಾಗಿದ್ದ ವೇಳಾಪಟ್ಟಿಗೆ ಅನುಗುಣವಾಗಿ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಹಾಗಿದ್ದರೂ ಈ ಎಲ್ಲ ಪ್ರಕ್ರಿಯೆಗಳು ಈಗ ತನ್ನ ಮುಂದೆ ಬಾಕಿ ಇರುವ ನೀಟ್ ವಿಷಯದ ಮೇಲಿನ ತನ್ನ ಅಂತಿಮ ನಿರ್ಧಾರ ಪ್ರಕಟನೆಗೆ ಒಳಪಟ್ಟು ಇರುತ್ತದೆ ಎಂದು ಜಸ್ಟಿಸ್ ಪಿ. ಸಿ ಪಂತ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ರಜಾಕಾಲದ ಪೀಠವು ಸ್ಪಷ್ಟಪಡಿಸಿತು.
2017ರ ನೀಟ್ ಪರೀಕ್ಷೆಗಳಿಗೆ ಸಂಬಂಧಿಸಿ ಇನ್ನು ಮುಂದೆ ಯಾವುದೇ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸದಿರುವಂತೆ ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಎಲ್ಲ ಹೈಕೋರ್ಟ್‌ಗಳಿಗೆ ಸೂಚಿಸಿತು.
ಸುಮಾರು 12 ಲಕ್ಷ ಮಂದಿ ಎದುರಿಸಿರುವ ನೀಟ್ ಪರೀಕ್ಷೆಗಳ ಫಲಿತಾಂಶ ಪ್ರಕಟನೆಗೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತಡಯಾಜ್ಞೆಯನ್ನು ಪ್ರಶ್ನಿಸಿ ಸಿಬಿಎಸ್‌ಇ ಮತ್ತು ಇತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ಇಂದು ಮಹತ್ತರ ತೀರ್ಪನ್ನು ನೀಡಿದೆ.