Advertisement
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ 2022-23ನೇ ಸಾಲಿನಲ್ಲಿ 1,093 ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯ ಕಾಮಗಾರಿಗಳಿಗೆ 312.13 ಕೋಟಿ ರೂ. ಸಹಾಯಧನ ಮಂಜೂರು ಮಾಡಲಾಗಿತ್ತು. ಇದೀಗ ಸಾಮೂಹಿಕವಾಗಿ ಮಂಜೂರಾತಿ ಆದೇಶವನ್ನೇ ರದ್ದುಪಡಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಆಘಾತ ಉಂಟುಮಾಡಿದೆ.
ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ 2014ರಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಅದರಂತೆ ಸಮುದಾಯ ಭವನ/ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯತ್/ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಲಕ್ಷ ರೂ., ತಾಲೂಕು ಕೇಂದ್ರ ಸ್ಥಾನ 25 ಲಕ್ಷ ರೂ. ಹಾಗೂ ಜಿಲ್ಲಾ ಕೇಂದ್ರ ಸ್ಥಾನ 50 ಲಕ್ಷ ರೂ.ಗಳಂತೆ ಗರಿಷ್ಠ ಮಿತಿಗೊಳಪಟ್ಟು ಪ್ರವರ್ಗ- 2, 2ಎ, 3ಎ, 3ಬಿಗೆ ಸೇರಿದ ಜಾತಿಗಳ ನೋಂದಾಯಿತ ಸ್ವಯಂ ಸೇವಾ ಸಂಘ-ಸಂಸ್ಥೆ ಅಥವಾ ಟ್ರಸ್ಟ್‌ಗಳಿಗೆ ಸಹಾಯಧನ ಮಂಜೂರು ಮಾಡಲಾಗುತ್ತದೆ. ಈ ಅನುದಾನದ ಮಿತಿಯನ್ನು ಅಗತ್ಯ ಸಂದರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ಹೆಚ್ಚುವರಿಯಾಗಿ ಮಂಜೂರು ಮಾಡಲಿಕ್ಕೂ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ಈ ಅನುದಾನವನ್ನು ಸರಕಾರಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಮೂಲಸೌಕರ್ಯ ವೃದ್ಧಿಗೆ ವಿನಿಯೋಗಿಸಿದರೆ ಹೆಚ್ಚು ಸೂಕ್ತ ಎಂಬಅಭಿಪ್ರಾಯವೂ ಆ ಸಮುದಾಯಗಳಿಂದ ಕೇಳಿಬರುತ್ತಿದೆ.
ಸಂಘ-ಸಂಸ್ಥೆಗಳಿಗೂ ಕತ್ತರಿ?2,400ಕ್ಕೂ ಅಧಿಕ ಸಂಘ-ಸಂಸ್ಥೆಗಳಿಗೆ ಇದೇ ಸಮುದಾಯ ಭವನ/ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಎರಡು ಮತ್ತು ಮೂರನೇ ಕಂತಿನಲ್ಲಿ ಅಂದಾಜು 559 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಆದರೆ ಬಜೆಟ್ ಇರುವುದೇ 100 ಕೋಟಿ ರೂ. ಹಾಗಾಗಿ ಆ ಸಂಘ-ಸಂಸ್ಥೆಗಳಲ್ಲೂ ಕೆಲವರಿಗೆ ಸಹಾಯಧನದಲ್ಲಿ ಈ ಬಾರಿ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
-ವಿಜಯ ಕುಮಾರ ಚಂದರಗಿ