Advertisement
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಂಡ ನಿಲುವು ಸ್ವಾಗತಾರ್ಹವಾಗಿದೆ. 2018ರಲ್ಲಿ ತಾನೇ ನೀಡಿದ್ದ ತೀರ್ಪಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಇದೇ ಕಾಯ್ದೆಗೆ ಮಾಡಿದ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆ ನೀಡಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡುವೆ ಯಾವುದೇ ಕಾನೂನಿನ ಸಂಘರ್ಷವೇರ್ಪಡದಂತೆ ವರ್ತಿಸಿರುವುದು ಗಮನಾರ್ಹವಾಗಿದೆ.ಇನ್ನು ಮುಂದೆ ಎಸ್‌ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವ ಮುನ್ನ ಯಾವುದೇ ಪೂರ್ವಭಾವಿ ವಿಚಾರಣೆ ಆಗಬೇಕಾಗಿಲ್ಲ, ಜತೆಗೆ ದೌರ್ಜನ್ಯವೆಸಗಿದ ಸರ್ಕಾರಿ ಅಧಿಕಾರಿಯನ್ನು ಬಂಧಿಸುವ ಮುನ್ನ ಮೇಲಧಿಕಾರಿಯ ಅನುಮತಿ ಪಡೆಯಬೇಕಾಗಿಲ್ಲ. ಆದರೂ, ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಸುಪ್ರೀಂಕೋರ್ಟ್, ಕಾಯ್ದೆಯ ದುರ್ಬಳಕೆ ತಡೆಗೂ ಕೊಂಚ ಅವಕಾಶ ನೀಡಿದೆ. ಕಾಯ್ದೆಯ ದುರ್ಬಳಕೆ ಆಗುತ್ತಿದೆ ಎಂಬುದು ಮನವರಿಕೆಯಾದರೆ ಅಥವಾ ಅಸಾಧಾರಣ ಸಂದರ್ಭದಲ್ಲಿ ಹೈಕೋರ್ಟ್‌ಗಳು ಎಫ್ಐಆರ್ ಅನ್ನು ರದ್ದು ಮಾಡಲು ಅವಕಾಶ ನೀಡಿದೆ. ಆದರೆ, ನಿರೀಕ್ಷಣಾ ಜಾಮೀನು ನೀಡುವಂತಿಲ್ಲ ಎಂಬ ಅಂಶಕ್ಕೆ
ಸುಪ್ರೀಂಕೋರ್ಟ್ ಮುದ್ರೆ ಸಿಕ್ಕಿದೆ.
Related Articles
Advertisement
ಸೋಮವಾರದ ಈ ತೀರ್ಪಿನ ಬಳಿಕ ಎಸ್‌ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ಇದ್ದ ಎಲ್ಲಾ ವಿವಾದಗಳು ಬಗೆಹರಿದಂತಾಗಿವೆ. ಅಷ್ಟೇ ಅಲ್ಲ, 2018ರ ಮಾರ್ಚ್ 3ರ ತೀರ್ಪು ಕೂಡ ಅಸಿಂಧುವಾಗಿದೆ. ಈ ವಿವಾದ ಅಂತ್ಯವಾಗಿದೆ ಎಂದು ಸಮಾಧಾನ ಪಟ್ಟುಕೊಳ್ಳುವಾಗಲೇ ಇದೇ ಎಸ್‌ಸಿ-ಎಸ್‌ಟಿ ವರ್ಗದವರ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ತೀರ್ಪೊಂದು ವಿವಾದ ಸೃಷ್ಟಿಸಿದೆ.
ಮೀಸಲಾತಿ ನೀಡುವುದು ರಾಜ್ಯಗಳ ವಿವೇಚನಾಧಿಕಾರ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೆ ಹಿಂದುಳಿದ ವರ್ಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಪ್ರತಿಪಕ್ಷಗಳು ಈ ಸಂಬಂಧ ಕೋರ್ಟ್‌ನಲ್ಲಿ ಪ್ರಬಲವಾಗಿ ವಾದ ಮಂಡಿಸಬೇಕು, ಪುನರ್ ಪರಿಶೀಲನಾ ಅರ್ಜಿ ದಾಖಲಿಸಬೇಕು ಎಂದು ಒತ್ತಾಯಿಸುತ್ತಿವೆ.
ಈ ಎರಡೂ ಪ್ರಕರಣಗಳನ್ನು ಗಮನಿಸಿದಾಗ ಒಂದಂತೂ ವೇದ್ಯವಾಗುತ್ತದೆ. ಯಾವುದೇ ಕೋರ್ಟ್ ವಕೀಲರ ವಾದ-ಪ್ರತಿ ವಾದದ ನಂತರವೇ ತೀರ್ಪು ನೀಡಲು ಸಾಧ್ಯ. 2012ರಲ್ಲಿ ರಾಜ್ಯ ಸರ್ಕಾರವೊಂದು ಮೀಸಲು ಕಾಯ್ದೆಯಲ್ಲಿ ಬದಲಾವಣೆಗೆ ಅರ್ಜಿ ಸಲ್ಲಿಸಿದೆ. ಆ ಸರ್ಕಾರದ ವಾದ-ಪ್ರತಿವಾದವನ್ನು ಕೇಳಿಯೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದಕ್ಕೂ ಮುನ್ನವೇ ಸರ್ಕಾರಗಳೇ ಸ್ವಲ್ಪ ವಿವೇಚನೆಯಿಂದ ವರ್ತಿಸಿ, ಮೂಲ ಕಾಯ್ದೆಗಳ ಬದಲಾವಣೆಗಾಗಿ ಅರ್ಜಿ ಸಲ್ಲಿಸದೇ ಇರುವುದೇ ಒಳ್ಳೆಯದು. ಇದರಲ್ಲಿ ಕೋರ್ಟ್‌ನ ದೂರುವುದು ಸರಿಯಲ್ಲ.