Advertisement

ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹಕ್ಕು ಮೊಟಕು: ಪ್ರತಿಭಟನೆ

09:09 PM Feb 15, 2020 | Lakshmi GovindaRaj |

ಮೈಸೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳವರ ಮೀಸಲಾತಿ, ಮುಂಬಡ್ತಿ ಹಕ್ಕು ಮೊಟಕುಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಗಾಂಧಿಚೌಕದಲ್ಲಿ ಸಮಾವೇಶಗೊಂಡ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳವರ ಮೀಸಲಾತಿ ಕುರಿತು ಸರ್ವೋತ್ಛ ನ್ಯಾಯಾಲಯದ ವ್ಯಾಖ್ಯಾನದ ಮರು ಪರಿಶೀಲನೆಗೆ ಕೇಂದ್ರಸರ್ಕಾರವನ್ನು ಒತ್ತಾಯಿಸಿದರು.

ಉತ್ತರಾಖಂಡ ರಾಜ್ಯಕ್ಕೆ ಸಂಬಂಧಿಸಿದಂತೆ ಸಿವಿಲ್‌ ಮೊಕದ್ದಮೆಯಲ್ಲಿ ಸರ್ವೋತ್ಛ ನ್ಯಾಯಾಲಯದ ನ್ಯಾಯಾಧೀಶರಾದ ಎಲ್‌.ನಾಗೇಶ್ವರ ರಾವ್‌ ಮತ್ತು ಹೇಮಂತ್‌ ಗುಪ್ತ ಅವರು ಫೆ.7ರಂದು ನೀಡಿದ ತೀರ್ಪಿನಲ್ಲಿ ಉತ್ತರಾಖಂಡ ರಾಜ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಒದಗಿಸಿಕೊಡಬೇಕಾಗಿದ್ದ ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರಾಖಂಡ ರಾಜ್ಯ ಹೈಕೋರ್ಟ್‌ ನೀಡಿದ್ದ ತೀರ್ಪಿನ ಮೇಲ್ಮನವಿಯ ತೀರ್ಪು ನೀಡುವಾಗ ಈ ವ್ಯಾಖ್ಯಾನ ಮಾಡಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವುದು ರಾಜ್ಯದ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದೆ. ಮೀಸಲಾತಿಯು ಮೂಲಭೂ ತ ಹಕ್ಕಲ್ಲ ಎಂಬ ವ್ಯಾಖ್ಯಾನವನ್ನು ನೀಡಿದೆ. ಇದು ಬಹಳ ಅಪಾಯಕಾರಿ ವ್ಯಾಖ್ಯಾನವಾಗಿದೆ. ಅಸಾಂವಿಧಾನಿಕವಾಗಿದೆ. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮುಂಬಡ್ತಿ ಹುದ್ದೆಗಳಲ್ಲಿ ಮೀಸಲಾತಿ: ಸಂವಿಧಾನದ ಮೂರನೇ ಅಧ್ಯಾಯವು ಮೂಲಭೂತ ಹಕ್ಕುಗಳ ಕುರಿತಾಗಿದ್ದು, ಅನುಚ್ಛೇದ 12ರಿಂದ ಅನುಚ್ಛೇದ 35ಇ ಮೂರನೇ ಅಧ್ಯಾಯದಲ್ಲಿ ಅಡಕವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಅದೇ ಮೂಲಭೂತ ಹಕ್ಕುಗಳ ಅಡಿಯಲ್ಲಿ ರೂಪಿಸಲಾದ ಅನುಚ್ಛೇದ 16(4) ಪ್ರಕಾರ ರಾಜ್ಯದ ಸೇವೆಗಳ ನೇರ ನೇಮಕಾತಿಯಲ್ಲಿ ಹಾಗೂ 16(4ಎ) ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮುಂಬಡ್ತಿ ಹುದ್ದೆಗಳಲ್ಲಿ ಮೀಸಲಾತಿ ದೊರಕಿಸಿಕೊಡ ಲಾಗುತ್ತದೆ ಎಂದರು.

Advertisement

ಸಾಮಾಜಿಕ ನ್ಯಾಯ ವಿರುದ್ಧ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮುಖಂಡರಾದ ಮನಮೋಹನ್‌ ವೈದ್ಯ ಅವರು ಮೀಸಲಾತಿ ವಿರುದ್ಧವಾಗಿ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ. ಮೀಸಲಾತಿ ವಿರೋಧಿ ಮನಸ್ಥಿತಿ ಹೊಂದಿದ ಸಂಘಪರಿವಾರದ ವಿರೋಧಿ ಚಿಂತನೆಯಾಗಿದೆ. ಸಂಘ ಪರಿವಾರ ಮತ್ತು ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ದೂರಿದರು.

ಮರುಪರಿಶೀಲನೆಗೆ ಅರ್ಜಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಹಿಂದುತ್ವದ ಅಜೆಂಡಾ ಮತ್ತದರ ರಹಸ್ಯ ಕಾರ್ಯಸೂಚಿಗಳ ಮಾರ್ಗದಲ್ಲಿ ಸರ್ಕಾರದ ಬಹುತೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನಗಳಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ತಾವು ಸಂವಿಧಾನದ ಪರ ಎಂಬುದನ್ನು ನಿರೂಪಿಸಲು ಹೈಕೋರ್ಟ್‌ನಲ್ಲಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್‌, ಕಳಲೆ ಕೇಶವಮೂರ್ತಿ, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಎಂ.ಲಕ್ಷ್ಮಣ, ಎಚ್‌.ಎ.ವೆಂಕಟೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ನಗರ ಅಧ್ಯಕ್ಷ ಆರ್‌.ಮೂರ್ತಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಲತಾ ಸಿದ್ಧಶೆಟ್ಟಿ, ನಗರ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next