Advertisement

Politics: ಕಾಂಗ್ರೆಸ್‌ಗೆ ಮತಬ್ಯಾಂಕ್‌ಗಷ್ಟೇ ಎಸ್‌ಸಿ, ಎಸ್‌ಟಿ ಸೀಮಿತ: ಬಿಜೆಪಿ

12:08 AM Jan 20, 2024 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಬಿಜೆಪಿ ಟೀಕಿಸಿದ್ದು, ಎಸ್‌ಸಿ, ಎಸ್‌ಟಿ ಸಮುದಾಯವನ್ನು ಮತಬ್ಯಾಂಕ್‌ಗೆ ಸೀಮಿತವಾಗಿ ಕಾಂಗ್ರೆಸ್‌ ಸರಕಾರ ಬಳಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದೆ.

Advertisement

ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಸಮಾವೇಶದ ವೇಳೆ ಸರಕಾರದ ವಿರುದ್ಧ ಕಿರಿಕಾರಿದ ಬಿಜೆಪಿ ನಾಯಕರು, ವಾಲ್ಮೀಕಿ ಸಮಾಜ ಹಾಗೂ ಬಿಜೆಪಿ ನಡುವೆ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಆದರೆ ಎಂದಿಗೂ ರಾಜಕೀಯ ಮತಬ್ಯಾಂಕ್‌ ಆಗಿ ಬಳಸಿಕೊಂಡಿಲ್ಲ ಎಂದರು.

ಪಂಚರಾಜ್ಯಗಳ ಫ‌ಲಿತಾಂಶ ಪುನರಾವರ್ತನೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ವಾಲ್ಮೀಕಿ ಸಮಾಜದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ಈ ಸಮುದಾಯವನ್ನು ಗುರುತಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ಕಾಂಗ್ರೆಸಿನವರು ಉದ್ದುದ್ದ ಭಾಷಣ ಮಾಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್‌ನ ಬೋಗಸ್‌ ಗ್ಯಾರಂಟಿಗಿಂತ ಮೋದಿ ಅವರ ಗ್ಯಾರಂಟಿಯೇ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಬೇಕಿದೆ. ಪಂಚರಾಜ್ಯಗಳ ಚುನಾವಣ ಫ‌ಲಿತಾಂಶವು ಲೋಕಸಭೆ ಚುನಾವಣೆಯಲ್ಲೂ ಪುನರಾವರ್ತನೆ ಆಗಬೇಕು ಎಂದು ಕರೆ ನೀಡಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌, ಉಪಾಧ್ಯಕ್ಷ ರಾಜುಗೌಡ ನಾಯಕ್‌, ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೇಲ್ಮನೆ ಸದಸ್ಯರಾದ ಡಾ| ತೇಜಸ್ವಿನಿ ಗೌಡ, ಹೇಮಲತಾ ನಾಯಕ್‌, ಮಾಜಿ ಶಾಸಕ ಶಿವನಗೌಡ ನಾಯಕ್‌ ಉಪಸ್ಥಿತರಿದ್ದರು. ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಅಧ್ಯಕ್ಷತೆ ವಹಿಸಿದ್ದರು.

Advertisement

ಬಿರ್ಸಾ ಮುಂಡಾರನ್ನು ಮರೆಸಿದ್ದ ನೀಚ ಕಾಂಗ್ರೆಸ್‌: ಜೋಷಿ
ಪ.ಜಾತಿ ಪಂಗಡದ ಕಲ್ಯಾಣಕ್ಕೆ ಕಾಂಗ್ರೆಸ್‌ ಏನೂ ಶ್ರಮ ವಹಿಸಿಲ್ಲ. ಭಗವಾನ್‌ ಬಿರ್ಸಾ ಮುಂಡಾ ಯಾರು ಎಂಬುದನ್ನೇ ಮರೆತು ಹೋಗುವಂತೆ ಮಾಡಿದ್ದ ನೀಚ ಪಕ್ಷ ಕಾಂಗ್ರೆಸ್‌ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು. ಮೋದಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ ಪರಿಶಿಷ್ಟರ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಭಗವಾನ್‌ ಬಿರ್ಸಾ ಮುಂಡಾ ಅವರು ಬ್ರಿಟಿಷರ ನಿದ್ದೆಗೆಡಿಸಿದ್ದ ಪರಿಶಿಷ್ಟ ಪಂಗಡದವರು, ಆದಿವಾಸಿಗಳ ನೇತೃತ್ವ ವಹಿಸಿದ್ದರು. ಎಲ್ಲ ಜನರನ್ನು ಗುರುತಿಸಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಎಸ್‌ಟಿ ಪಂಗಡಕ್ಕೆ ಸೇರಿದ ಹಿಂದುಳಿದ ಪ್ರದೇಶದಲ್ಲಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇ ಬಿಜೆಪಿ ಎಂದು ಪ್ರತಿಪಾದಿಸಿದರು.

ಮೀಸಲಾತಿಗಾಗಿ ಬಡಿಗೆ ಹಿಡಿದು ನಿಲ್ಲುತ್ತೇವೆ: ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿದ್ದೆವು. ಡೋಂಗಿ ಸಾಮಾಜಿಕ ನ್ಯಾಯದ ನಾಯಕರು ಈ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಮಿಸಲಾತಿ ಹೆಚ್ಚಳದ ನಿರ್ಣಯ ನಾವು ಮಾಡಿದ್ದೇವೆ. ಅದನ್ನು ಸರಿಯಾಗಿ ಅನುಷ್ಠಾನ ಮಾಡುವಂತೆ ಸರಕಾರಕ್ಕೆ ಬಡಿಗೆ ಹಿಡಿದು ನಿಲ್ಲುತ್ತೇವೆ. ಎಸ್ಟಿ ಸಮುದಾಯಕ್ಕೆ ನ್ಯಾಯ ಕೊಡಿಸಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ದೊಡ್ಡ ಅಂತರದಲ್ಲಿ ಗೆಲ್ಲಲು ಶ್ರಮಿಸಿ: ಬಿಎಸ್‌ವೈ
ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಶತಮಾನಗಳಿಂದ ತುಳಿತಕ್ಕೆ ಒಳಗಾದ ಹಲವಾರು ವರ್ಗಗಳಲ್ಲಿ ಪರಿಶಿಷ್ಟ ಪಂಗಡವೂ ಒಂದು. ಸಾಮಾಜಿಕ ನ್ಯಾಯ ಒದಗಿಸಬೇಕಾದ ಕಾಂಗ್ರೆಸ್‌ ಸರಕಾರ ಈ ಸಮುದಾಯಗಳನ್ನು ಮತಬ್ಯಾಂಕಾಗಿ ಮಾಡಿಕೊಂಡಿತ್ತು. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿತ್ತು. ಇದ್ಯಾವುದನ್ನೂ ಮಾಡದೇ ಅಭಿವೃದ್ಧಿ ವಂಚಿತರನ್ನಾಗಿ ಮಾಡಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರದಿಂದ ಆಚರಿಸಲು ದೇಶ ಹೊರಡಿಸಿದ್ದೆ. ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಯಿತು ಎಂದು ಸ್ಮರಿಸಿದರು.

ಕಾನೂನು, ಸಂವಿಧಾನದ ಪ್ರಕಾರ ಬಸವರಾಜ ಬೊಮ್ಮಾಯಿ ಸರಕಾರ ಏನು ಮಾಡಬೇಕೋ ಆದನ್ನು ಮಾಡಿತ್ತು. ಶೇ.3 ರಿಂದ ಎಸ್‌ಟಿ ಮೀಸಲಾತಿಯನ್ನು ಶೇ.7ಕ್ಕೆ ಏರಿಸಿತ್ತು. ನಮ್ಮ ಜವಾಬ್ದಾರಿ ಇದ್ದರೆ ಮಾಡುತ್ತೇವೆ. ರಾಜ್ಯ ಸರಕಾರ ಏನು ಕಳುಹಿಸಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇವೆ.
– ಪ್ರಹ್ಲಾದ್‌ ಜೋಷಿ, ಕೇಂದ್ರ ಸಚಿವ

ಸದಾ ಸಮುದಾಯದ ಬೆನ್ನಿಗೆ ನಿಂತಿರುವ ಬಿಜೆಪಿ ಹಾಗೂ ಯಡಿಯೂರಪ್ಪರನ್ನು ನಮ್ಮ ಸಮುದಾಯ ನೆನಪಿಡಬೇಕು. ಕಳೆದ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಒಬ್ಬರೂ ವಾಲ್ಮೀಕಿ ಸಮುದಾಯದ ನಾಯಕರು ಗೆದ್ದಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಿಸದೆ ಇರುವುದು ಯಾರ ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್‌ ನಮ್ಮ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ. – ಬಿ. ಶ್ರೀರಾಮುಲು, ಮಾಜಿ ಸಚಿವ

ನ್ಯಾ| ಸದಾಶಿವ ಆಯೋಗದ ವರದಿಯನ್ನು ಹಿಂದಿನ ಸರಕಾರ ತಿರಸ್ಕರಿಸಿ, ಎಸ್‌ಸಿಗೆ ಶೇ.17 ಹಾಗೂ ಎಸ್‌ಟಿಗೆ ಶೇ.7ರಷ್ಟು ಮೀಸಲಾತಿ ಹೆಚ್ಚಿಸಿತ್ತಲ್ಲದೆ, ಎಸ್‌ಸಿ ಎಡಗೈಗೆ ಶೇ.6, ಬಲಗೈಗೆ ಶೇ.5, ಬೋವಿ, ಲಂಬಾಣಿಗೆ ಶೇ.4.5 ಮತ್ತು ಇತರರಿಗೆ ಶೇ.1 ಎಂದು ಮೀಸಲಾತಿ ವಿಭಜಿಸಿ ಕೇಂದ್ರಕ್ಕೆ ಕಳುಹಿಸಿತ್ತು. ಇದು ಸಂವಿಧಾನಕ್ಕೆ ವಿರುದ್ಧವಾಗಿತ್ತು. ಹೀಗಾಗಿ ಕಾನೂನು ಅಭಿಪ್ರಾಯ ಪಡೆದು ಸಂವಿಧಾನ ತಿದ್ದುಪಡಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ.       – ಡಾ| ಜಿ. ಪರಮೇಶ್ವರ್‌, ಗೃಹಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next