ಧಾರವಾಡ: ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿ ಕೊಡಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ನಗರದ ಲಕ್ಕಮ್ಮನಹಳ್ಳಿ ಲಿಡಕರ್ ಸಂಕೀರ್ಣದಲ್ಲಿ ನಿರ್ಮಿಸಿರುವ ಸಮುದಾಯ ಭವನದ ಉದ್ಘಾಟನೆ ಮತ್ತು ಜಿ+2 ಮಾದರಿಯ ವಸತಿ ಸಹಿತ ಕಾರ್ಯಾಗಾರಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಸಮಾಜದ ಜನರಿಗೆ ಮನೆಗಳಿಲ್ಲ ಎಂಬ ಕೊರಗು ಇರದಿರಲಿ. ಮನೆಗಳು ಇಲ್ಲದವರು ಆಶ್ರಮ ಮನೆ ಪಡೆಯಲು ಬಯಸಿ ಪಟ್ಟಿ ಮಾಡಿ ಸಲ್ಲಿಸಿದರೆ ಜಮೀನು ಗುರುತಿಸಿ, ನಿವೇಶನ ಸಿದ್ಧಪಡಿಸಿ ಮನೆ ಕಟ್ಟಿಕೊಡಲಾಗುವುದು ಎಂದು ಭರವಸೆ ನೀಡಿದರು.
ಚರ್ಮೋದ್ಯಮ ಬೆಳವಣಿಗೆ ಮತ್ತು ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳ ಶ್ರೇಯೋಭಿವೃದ್ಧಿಗೆ ಸರಕಾರ ಸಾಕಷ್ಟು ಅಭಿವೃದ್ಧಿ ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು. ಈ ಸಮಾಜದ ನಿರುದ್ಯೋಗ ಯುವಕ-ಯುವತಿಯರು ತರಬೇತಿ ಕಾರ್ಯಾಗಾರದ ಸದುಪಯೋಗ ಪಡಿಸಿಕೊಂಡು ಸ್ವಯಂ ಉದ್ಯೋಗ ಹೊಂದಬೇಕು ಎಂದು ತಿಳಿಸಿದರು.
ಸರಕಾರ ಲಿಡಕರ್ ನಿಗಮದಿಂದ ಕೈಗಾರಿಕಾ ತರಬೇತಿ ಪಡೆದ ಜನರಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಶಿಕ್ಷಣದಿಂದ ವಂಚಿತರಾಗಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಎಸ್‌ಸಿ-ಎಸ್‌ಟಿ ಸಮಾಜದ ಯುವಕ-ಯುವತಿಯರಿಗೆ ಸರಕಾರ 5 ಲಕ್ಷ ರೂ.ಗಳ ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಲಿಡಕರ್ ಕಾಲೋನಿಯಿಂದ ನವಲೂರು ರಸ್ತೆಯ ವರೆಗೆ ಸಿಸಿ ರಸ್ತೆಯನ್ನಾಗಿಸುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಚರ್ಮಗಾರರಿಗೆ ನೀಡಿದ ವಸತಿ ನಿವೇಶನಗಳು ಸರಕಾರದ ಆದೇಶದಂತೆ 99 ವರ್ಷಗಳ ಲೀಜ್ ಆಧಾರದಲ್ಲಿವೆ.
ಅವುಗಳಿಗೆ ಎನ್‌ಒಸಿ ನೀಡುವಂತೆ ಸಮಾಜದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆದರೆ ಎನ್‌ಒಸಿ ನೀಡುವ ವಿಚಾರವನ್ನು ಸರಕಾರ ಕೈಬಿಟ್ಟಿದ್ದು, ಒಂದು ವೇಳೆ ನಿವೇಶನದಾರರಿಗೆ ಬ್ಯಾಂಕ್ ಸಾಲ ಸೌಲಭ್ಯ ಬೇಕಾದಲ್ಲಿ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಲಕ್ಕಮ್ಮನಹಳ್ಳಿ ಸಂಕೀರ್ಣದಲ್ಲಿ ಜಿ+2 ಮಾದರಿಯ ವಸತಿ ಸಹಿತ ಕಾರ್ಯಾಗಾಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು. ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಓ.ಶಂಕರ, ಮಹಾಪೌರ ಡಿ.ಕೆ. ಚೌವ್ಹಾಣ, ಕರ್ನಾಟಕ ಬಾಲವಿಕಾಸ ಅಕಾಡೆಮಿ ವೇದವ್ಯಾಸ ಕೌಲಗಿ, ಪಾಲಿಕೆ ಸದಸ್ಯ ಶಂಕರ ಶಳಕೆ ಇದ್ದರು.