ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ
ಅಭ್ಯರ್ಥಿಗಳು ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಮೇಲ್ಮನೆ ಸದಸ್ಯ ಡಿ.ಎಸ್.ವೀರಯ್ಯ
ಹೇಳಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 36 ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ 16 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ 12, ಜೆಡಿಎಸ್ 7, ಬಿಎಸ್‌ಪಿಯ 1 ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಹಾಗೆಯೇ ಪರಿಶಿಷ್ಟ ಪಂಗಡದ 15 ಮೀಸಲು ಕ್ಷೇತ್ರದಲ್ಲಿ 7 ಮಂದಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಬಿಜೆಪಿ ಜತೆ ಇದ್ದಾರೆ ಎಂಬುದನ್ನು ಇದು ಸಾಬೀತು ಮಾಡಿದೆ ಎಂದು ಹೇಳಿದರು.
ಬಿಜೆಪಿ ಕೋಮುವಾದಿ ಪಕ್ಷ, ಸಂವಿಧಾನ ಬದಲಿಸುತ್ತಾರೆ, ಮೀಸಲಾತಿ ಕಿತ್ತು ಹಾಕುತ್ತಾರೆ ಎಂಬಿತ್ಯಾದಿ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ವಸತಿ, ಶಿಕ್ಷಣ, ಉದ್ಯೋಗ ಸೇರಿ
ಯಾವುದೇ ಸೌಲಭ್ಯವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಳೆದ 60 ವರ್ಷದಲ್ಲಿ ಕಾಂಗ್ರೆಸ್ ನೀಡಿಲ್ಲ ಎಂದು ದೂರಿದರು.
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಐದು ಮೀಸಲಾತಿ ಆದೇಶ ರದ್ದು ಮಾಡಿದ್ದಾರೆ. ಬಡ್ತಿ ಮೀಸಲಾತಿ, ಮೀಸಲಾತಿಯಲ್ಲಿ ರೊಸ್ಟರ್ ಬದಲಿಸಿದರು, ವಿವಿಧ ಕ್ಷೇತ್ರದ ರಿಯಾಯ್ತಿಗಳನ್ನು ರದ್ದು ಮಾಡುವ ಮೂಲಕ ಮೀಸಲಾತಿಯನ್ನು ನೆಲಸಮ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯದರ್ಶಿಗಳಾದ ರಮೇಶ್, ಆತ್ಮಾನಂದ, ವೆಂಕಟೇಶ್ ಉಪಸ್ಥಿತರಿದ್ದರು.