ಹೊಸದಿಲ್ಲಿ : ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ “ಪದ್ಮಾವತ್’ಗೆ ಕೇಂದ್ರ ಸೆನ್ಸಾರ್ ಮಂಡಳಿ ನೀಡಿರುವ ಸರ್ಟಿಫಿಕೇಟನ್ನು ರದ್ದು ಮಾಡುವಂತೆ ತುರ್ತು ವಿಚಾರಣೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಆಯಾ ರಾಜ್ಯ ಸರಕಾರಗಳಿಗೆ ಸಂಬಂಧಿಸಿದ ವಿಷಯ; ಅದನ್ನು ನಿಭಾಯಿಸುವುದು ಅವುಗಳ ಬದ್ಧತೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಪದ್ಮಾವತ್ ಚಿತ್ರದ ದೇಶವ್ಯಾಪಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ ಸೆನ್ಸಾರ್ ಸರ್ಟಿಫಿಕೇಟ್ ಪಡೆದ ಚಿತ್ರವನ್ನು ಯಾವುದೇ ರಾಜ್ಯ ಸರಕಾರ ಬಹಿಷ್ಕರಿಸುವಂತಿಲ್ಲ ಎಂದು ಹೇಳಿತ್ತು.
ಈ ನಡುವೆ ಪದ್ಮಾವತ್ ವಿರುದ್ಧ ಮತ್ತೆ ಪ್ರಬಲ ಪ್ರತಿಭಟನೆಗೆ ಮುಂದಾಗಿರುವ ರಾಜಪೂತ ಕರ್ಣಿ ಸೇನೆ, ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಷಿ ಅವರಿಗೆ ನಾವು ರಾಜಸ್ಥಾನಕ್ಕೆ ಕಾಲಿಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದೆ.
ಕರ್ಣಿ ಸೇನೆಯ ಸದಸ್ಯರಾಗಿರುವ ಸುಖದೇವ್ ಸಿಂಗ್ ಅವರು ಇಂದು ಶುಕ್ರವಾರ ಈ ಬೆದರಿಕೆಯನ್ನು ಹಾಕಿದರು. “ಪದ್ಮಾವತ್’ ಐತಿಹಾಸಿಕ ಕಥಾ ಚಿತ್ರಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿರುವ ಹೊರತಾಗಿಯೂ ರಾಜಪೂತ್ ಕರ್ಣಿ ಸೇನಾ ಕಾರ್ಯಕರ್ತರು ಇಂದು ಬಿಹಾರದ ಮುಜಫರನಗರದಲ್ಲಿನ ಚಿತ್ರಮಂದಿವೊಂದರ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದರು.
ಪದ್ಮಾವತ್ ಚಿತ್ರಕ್ಕೆ ಕ್ಲೀನ್ ಚಿಟ್ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ನಾವು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಕರ್ಣಿ ಸೇನಾ ಹೇಳಿತ್ತು. ಇದೇ ಜನವರಿ 25ರಂದು ಪದ್ಮಾವತ್ ಚಿತ್ರ ತೆರೆ ಕಾಣಲಿದೆ.