ನವದೆಹಲಿ: ಭಾರತದಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ (ಬಿಬಿಸಿ) ಗೆ ಸಂಪೂರ್ಣವಾಗಿ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ (ಫೆ.10) ವಜಾಗೊಳಿಸಿದೆ.
ಇದನ್ನೂ ಓದಿ:13 ಗಂಟೆ ತಡವಾಗಿ ಹಾರಿದ 170 ಪ್ರಯಾಣಿಕರಿದ್ದ ಮುಂಬಯಿ- ದುಬೈ ವಿಮಾನ
ರೈತ ಬೀರೇಂದ್ರ ಕುಮಾರ್ ಸಿಂಗ್ ಮತ್ತು ಹಿಂದೂ ಸೇನಾದ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ಜಸ್ಟೀಸ್ ಸಂಜೀವ್ ಖನ್ನಾ ಮತ್ತು ಜಸ್ಟೀಸ್ ಎಂಎಂ ಸುಂದರೇಶ್ ಅವರನ್ನೊಳಗೊಂಡ ಪೀಠ, ಬಿಬಿಸಿ ಡಾಕ್ಯುಮೆಂಟರಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದು ತಿಳಿಸಿ ಆದೇಶ ನೀಡಿದೆ.
ಈ ಅರ್ಜಿ ಡಾಕ್ಯುಮೆಂಟರಿ ಕುರಿತು ತಪ್ಪಾಗಿ ಗ್ರಹಿಸಿದ್ದು, ಇದು ವಿಚಾರಣೆಗೆ ಯಾವುದೇ ಅರ್ಹತೆ ಹೊಂದಿಲ್ಲ ಎಂದು ಹೇಳಿ ಸುಪ್ರೀಂಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿರುವುದಾಗಿ ತಿಳಿಸಿದೆ.
ಭಾರತ ಮತ್ತು ಭಾರತ ಸರ್ಕಾರದ ವಿರುದ್ಧ ಬಿಬಿಸಿ ಪಕ್ಷಪಾತಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರವು “ಭಾರತ ಮತ್ತು ಪ್ರಧಾನಿ ಮೋದಿ ಅವರ ಜಾಗತಿಕ ಬೆಳವಣಿಗೆ ವಿರುದ್ಧದ ವ್ಯವಸ್ಥಿತ ಪಿತೂರಿಯ ಭಾಗವಾಗಿದೆ ಎಂದು ಉಲ್ಲೇಖಿಸಲಾಗಿದೆ.
2002 ಗುಜರಾತ್ ಕೋಮು ದಳ್ಳುರಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ಹೊಂದಿದ್ದು, ಬಿಬಿಸಿ ಹಿಂದೂ ವಿರೋಧಿ ಅಜೆಂಡಾದ ಮೂಲಕ ಭಾರತದಲ್ಲಿ ಸಾಮಾಜಿಕ ತಳಹದಿಯನ್ನು ಬುಡಮೇಲು ಮಾಡಲು ಹೊರಟಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.