ಹೊಸದಿಲ್ಲಿ : ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್, ಕೇರಳದ ಪದಚ್ಯುತ ಡಿಜಿಪಿ ಟಿ ಪಿ ಸೇನ್‌ಕುಮಾರ್ ಅವರನ್ನು ಹುದ್ದೆಯಲ್ಲಿ ಮರು ಸ್ಥಾಪಿಸುವಂತೆ ಇಂದು ಸೋಮವಾರ ಆದೇಶಿಸಿದೆ. ಆ ಈ ಮೂಲಕ ಸುಪ್ರೀಂ ಕೋರ್ಟ್, ಅಧಿಕಾರಸ್ಥ ರಾಜಕಾರಣಿಗಳು ತಮ್ಮ ಇಚ್ಛಾನುಸಾರ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಕೇರಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸರಕಾರವು ಸೇನ್ ಕುಮಾರ್ ಅವರನ್ನು ಅನುಚಿತವಾಗಿ ನಡೆಸಿಕೊಂಡಿದೆ ಎಂದು ಜಸ್ಟಿಸ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಹೇಳುವ ಮೂಲಕ ಕೇರಳದಲ್ಲಿನ ಪಿಣರಾಯಿ ವಿಜಯನ್ ನೇತೃತ್ವದ ಆಳುವ ಎಲ್‌ಡಿಎಫ್ ಸರಕಾರಕ್ಕೆ ನೇರ ತಪರಾಕಿಯನ್ನು ನೀಡಿದೆ.
ಈ ಹಿಂದೆ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕೇರಳ ಸರಕಾರಕ್ಕೆ “ಡಿಜಿಪಿ ಹುದ್ದೆಯ ಕಾರ್ಯಾವಧಿಯು ಕನಿಷ್ಠ ಎರಡು ವರ್ಷಕ್ಕೆ ಖಚಿತವಾಗಿರಬೇಕು ಮತ್ತು ಅವರನ್ನು ರಾಜ್ಯದಲ್ಲಿನ ಅಧಿಕಾರಸ್ಥರು ತಮ್ಮ ಇಷ್ಟಾನುಸಾರ ಅವರನ್ನು ಬೇಕೆಂದಾಗ ಬೇಕೆಂದಲ್ಲಿಗೆ ಎತ್ತಂಗಡಿ ಮಾಡಬಾರದು’ ಎಂದು ಹೇಳಿತ್ತು.
ಸುಪ್ರೀಂ ಕೋರ್ಟಿನ ಈ ಕಡ್ಡಾಯ ಆದೇಶವನ್ನು ಗಾಳಿಗೆ ತೂರಿ ಕೇರಳ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹುದ್ದೆಯಿಂದ ಅಮಾನತುಗೊಳಿಸುವುದು, ಖುಷಿ ಬಂದಾಗ ಖುಷಿ ಬಂದೆಡೆಗೆ ವರ್ಗಾಯಿಸುವುದನ್ನು ಮಾಡುತ್ತಲೇ ಇದೆ. ಇದೀಗ ಸೇನ್ ಕುಮಾರ್ ಪ್ರಕರಣದಲ್ಲಿನ ತಾಜಾ ತೀರ್ಪಿನ ಮೂಲಕ ಪಿಣರಾಯಿ ಸರಕಾರವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಂತಾಗಿದೆ.
ಸೇನ್ ಕುಮಾರ್ ಅವರನ್ನು ಹುದ್ದೆಯಲ್ಲಿ ಪುನರ್‌ಸ್ಥಾಪಿಸುವ ಸುಪ್ರೀಂ ಕೋರ್ಟಿನ ಈ ತಾಜಾ ತೀರ್ಪಿನಿಂದಾಗಿ, ಸೇನ್ ಕುಮಾರ್ ಜಾಗಕ್ಕೆ ಬಂದಿರುವ ಹಾಲಿ ಡಿಜಿಪಿ ಲೋಕನಾಥ್ ಬೆಹರಾ ಅವರಿಗೆ ಸ್ಥಾನಚ್ಯುತಿ ಉಂಟಾಗುವುದು ಖಚಿತವಾಗಿದೆ.
ಸುಪ್ರೀಂ ಕೋರ್ಟಿನ ಈ ತೀರ್ಪಿಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನತ್ತಲ ಅವರು, “ಮುಖ್ಯಮಂತ್ರಿ ಪಿಣರಾಯಿ ಅವರು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.