ಬೆಳಗಾವಿ: ಪಂಚಮಸಾಲಿ, ಒಕ್ಕಲಿಗ ಸ್ವಾಮೀಜಿಗಳ ಬಳಿಕ ಈಗ ರಾಜ್ಯದ ಎಸ್‌ಸಿ-ಎಸ್‌ಟಿ ಸಮುದಾಯದ ಮಠಾಧೀಶರು ಒಗ್ಗಟ್ಟು ಪ್ರದರ್ಶಿಸಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದರೂ ಎಸ್‌ಸಿ ಅಥವಾ ಎಸ್‌ಟಿ ಸಮಾಜದವರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಬಾಕ್ಸೈಟ್ ರಸ್ತೆಯಲ್ಲಿರುವ ನಕ್ಷತ್ರಾ ಗಾರ್ಡನ್‌ನಲ್ಲಿ ಸೋಮವಾರ ಸ್ವಾಭಿಮಾನಿ ಎಸ್‌ಸಿ-ಎಸ್‌ಟಿ ಸಂಘಟನೆಗಳ ಒಕ್ಕೂಟ ವತಿಯಿಂದ ಮಠಾಧೀಶರ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಇಷ್ಟು ದಿನಗಳ ಕಾಲ ಎಸ್‌ಸಿ-ಎಸ್‌ಟಿ ಸಮಾಜದವರನ್ನು ಯಾಮಾರಿಸಲಾಗಿದೆ. ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ಜನಸಂಖ್ಯೆ 2 ಕೋಟಿಯಷ್ಟಿದ್ದು, ನಮ್ಮ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ. ಅಸ್ಪೃಶ್ಯರೆಂದರೆ ಬಹಳ ಹಗುರವಾಗಿ ಮಾತನಾಡುವವರಿಗೆ ಬಹಿರಂಗ ಸವಾಲು ಹಾಕುತ್ತೇವೆ. 2023ಕ್ಕೆ ಎಸ್‌ಸಿ ಅಥವಾ ಎಸ್‌ಟಿ ಸಮಾಜದವರು ಮುಖ್ಯಮಂತ್ರಿ ಆಗಬೇಕು. ಇದನ್ನು ಮಾಡಲಿಕ್ಕೆ ನಾವೆಲ್ಲರೂ ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಜತೆ ಸೇರಿಕೊಂಡಿದ್ದೇವೆ. ಇನ್ನು ಎಷ್ಟು ವರ್ಷ ಎಸ್‌ಸಿ-ಎಸ್ಟಿ ಸಮುದಾಯ ಜನ ಭಿಕ್ಷುಕರಾಗಬೇಕು ಎಂದರು.
ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರಾ ಗುರುಪೀಠದ ಸಂತ ಸೇವಾಲಾಲ ಸ್ವಾಮೀಜಿ, ಚಿತ್ರದುರ್ಗ ಮೇದಾರ ಕೇತೇಶ್ವರ ಗುರುಪೀಠದ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.