ಹೊಸದಿಲ್ಲಿ: ಉಪಮುಖ್ಯಮಂತ್ರಿ ವಿರುದ್ದದ ಆದಾಯ ಮೀರಿದ ಆಸ್ತಿ (Disproportionate assets) ಪ್ರಕರಣದ ಸಿಬಿಐ ತನಿಖೆಗೆ ಒಪ್ಪಿಗೆ ಹಿಂತೆಗೆದುಕೊಳ್ಳುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಶುಕ್ರವಾರ(ನ8) ಕರ್ನಾಟಕ ಸರಕಾರ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ಉತ್ತರ ಕೋರಿದೆ.
2023 ನವೆಂಬರ್ 23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ, ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದ ಹಿಂದಿನ (2019) ಬಿಜೆಪಿ ಸರಕಾರದ ಕ್ರಮವು ಕಾನೂನು ಪ್ರಕಾರವಾಗಿಲ್ಲ ಎಂದು ಮಂಜೂರಾತಿಯನ್ನು ಹಿಂಪಡೆಯಲು ನಿರ್ಧರಿಸಿತ್ತು.
ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ ಅರ್ಜಿಯನ್ನು “ನಿರ್ವಹಣೆ ಮಾಡಲಾಗುವುದಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಪರಿಗಣಿಸಿತ್ತು. ಆ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಯತ್ನಾಳ್ ಪ್ರಶ್ನಿಸಿದ್ದರು.
ಯತ್ನಾಳ್ ಸಲ್ಲಿಸಿದ್ದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ನ ಇದೇ ಪೀಠ ಸೆಪ್ಟೆಂಬರ್ 17ರಂದು ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಆಗಸ್ಟ್ 29 ರಂದು, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು, ಇದು 2023 ರ ಡಿಸೆಂಬರ್ 26 ರ ರಾಜ್ಯ ಸರಕಾರದ 74.93 ಕೋಟಿ ರೂ. ಅಕ್ರಮ ಆಸ್ತಿ ಪ್ರಕರಣದ ತನಿಖೆಗಾಗಿ ಲೋಕಾಯುಕ್ತಕ್ಕೆ ಉಲ್ಲೇಖಿಸಿದ ಆದೇಶವನ್ನು ಪ್ರಶ್ನಿಸಿದೆ.
2013 ಮತ್ತು 2018 ರ ನಡುವೆ ಡಿ.ಕೆ.ಶಿವಕುಮಾರ್ ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂದು ಎಂದು ಸಿಬಿಐ ಆರೋಪಿಸಿದೆ.