ನವದೆಹಲಿ: ಮುಸ್ಲಿಂ ಧರ್ಮದಲ್ಲಿನ ಏಕಪಕ್ಷೀಯ ತಲಾಖ್‌ನ ವಿವಿಧ ರೂಪಗಳಾಗಿ ಉಳಿದುಕೊಂಡಿರುವ “ತಲಾಖ್-ಎ-ಕಿನಾಯ’ ಮತ್ತು “ತಲಾಖ್-ಎ-ಬೈನ್’ ಪದ್ಧತಿಗಳನ್ನೂ ನಿಷೇಧಿಸಬೇಕು ಎಂದು ಕೋರಿ ಕರ್ನಾಟಕದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕದ ಸೈಯದ್ ಅಂಬ್ರಿನ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎ.ನಜೀರ್ ಹಾಗೂ ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಕಾನೂನು ಸಚಿವಾಲಯ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ಇತರರಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ.
“ಈ ಎರಡೂ ತಲಾಖ್ ರೂಪಗಳು ಹಿಂದಿನ ಕಾಲದ ಸತಿ ಪದ್ಧತಿ ಇದ್ದಂತೆಯೇ. ಇದು ಅನಿಯಂತ್ರಿತವಾಗಿದ್ದು, ಇದರಿಂದ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಹಾಗಾಗಿ ಈ ಪದ್ಧತಿಗಳನ್ನು ನಿಷೇಧಿಸಿ, ಲಿಂಗ, ಧರ್ಮ ಭೇದವಿಲ್ಲದ, ಎಲ್ಲ ನಾಗರಿಕರಿಗೂ ಸಮಾನವಾದ ವಿಚ್ಛೇದನ ಪ್ರಕ್ರಿಯೆಯ ಮಾರ್ಗಸೂಚಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಜನವರಿ ತಿಂಗಳಲ್ಲಿ ಕಾಝಿ ಕಚೇರಿಯಿಂದ ತನಗೆ ಪತಿಯ ಪತ್ರ ಬಂದಿದ್ದು, ಅದರಲ್ಲಿ “ನಾನು ನಿನ್ನನ್ನು ಮದುವೆಯಿಂದ ಮುಕ್ತಗೊಳಿಸುತ್ತಿದ್ದೇನೆ’ ಎಂದು ಬರೆದಿತ್ತು. ಇದು ಕಿನಾಯಾ ರೀತಿಯಲ್ಲಿ ತಲಾಖ್ ನೀಡುವುದು ಎಂದು ಅರ್ಜಿದಾರರು ತಮ್ಮ ಬದುಕನ್ನೇ ಅರ್ಜಿಯಲ್ಲಿ ಉದಾಹರಣೆಯಾಗಿ ಕೊಟ್ಟಿದ್ದರು.