ಹೊಸದಿಲ್ಲಿ : ಜೆಇಇ (ಅಡ್ವಾನ್‌ಸಡ್) ಐಐಟಿ ಕೌನ್ಸೆಲಿಂಗ್ ಮತ್ತು ಸೇರ್ಪಡೆ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ಇಂದು ಶುಕ್ರವಾರ ತಡೆಯಾಜ್ಞೆ ನೀಡಿದೆ.
ಜೆಇಇ – ಅಡ್ವಾನ್ಸ್‌ಡ್ ಗೆ ಸಂಬಂಧಿಸಿದಂತೆ ದೇಶದ ಯಾವುದೇ ಹೈಕೋರ್ಟ್‌ಗಳು ಈಗಿನ್ನು ಯಾವುದೇ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಕೂಡದು ಎಂದು ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.
ಹೈಕೋರ್ಟ್‌ಗಳ ಮುಂದೆ ಈಗ ಜೆಇಇ – ಐಐಟಿ ಅಡ್ವಾನ್ಸ್‌ಡ್ ಗೆ ಸಂಬಂಧಿಸಿ ಎಷ್ಟು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ ಮತ್ತು ಅವುಗಳ ಸ್ವರೂಪ ಏನು ಎಂಬುದನ್ನು ಶನಿವಾರದ ಒಳಗೆ ತನಗೆ ತಿಳಿಸುವಂತೆ ಸುಪ್ರೀಂ ಕೋರ್ಟ್, ಎಲ್ಲ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ನಿರ್ದೇಶನ ನೀಡಿದೆ.
ಅಡ್ವಾನ್ಸ್‌ಡ್ ಕೋರ್ಸಿಗಾಗಿ ಐಐಟಿ ಜಂಟಿ ಪ್ರವೇಶ ಪರೀಕ್ಷೆಯನ್ನು ಎದುರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಏಳು ಇತರೇ ಅಂಕಗಳನ್ನು ಮಂಜೂರು ಮಾಡುವ ಕ್ರಮವನ್ನು ಪ್ರಶ್ನಿಸಿದ ಅರ್ಜಿಗೆ ಉತ್ತರಿಸುವಂತೆ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಕೇಳಿಕೊಂಡಿತ್ತು.
ಹಿಂದಿ ಭಾಷಾ ಪ್ರಶ್ನ ಪತ್ರಿಕೆಯಲ್ಲಿ ಮುದ್ರಣ ದೋಷಗಳು ಇದ್ದುದರಿಂದ ಎಲ್ಲ ಪರೀಕ್ಷಾರ್ಥಿಗಳಿಗೆ ಇತರೇ ಏಳು ಅಂಕಗಳನ್ನು ನೀಡಲಾಗಿತ್ತು.