ಹೊಸದಿಲ್ಲಿ: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರ ರಾಜಕೀಯ ಪ್ರಹಸನ ಕುರಿತಂತೆ ಸುಪ್ರೀಂ ಕೋರ್ಟ್, ಇವತ್ತೇ ಬಹುಮತ ಸಾಬೀತು ಬೇಡ ಎಂದಿದೆ. ಬಹುಮತ ಸಾಬೀತು ಮಾಡುವ ಬಗ್ಗೆ ಸೋಮವಾರ ಬೆಳಿಗ್ಗೆ 10.30ಕ್ಕೆ ಮತ್ತೆ ವಿಚಾರಣೆ ನಡೆಸುವುದಾಗಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಶನಿವಾರ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆ- ಎನ್ ಸಿಪಿ – ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು.
ನಾಳೆ ವಿಚಾರಣೆ ನಡೆಸಿದ ನಂತರ ಅಂತಿಮ ತೀರ್ಪು ಪ್ರಕಟಿಸುವುದಾಗಿ ಹೇಳಿದ ಕೋರ್ಟ್, ರಾಜ್ಯಪಾಲರಿಗೆ ನೀಡಿದ ಪತ್ರಗಳನ್ನು ತರಲು ಸೂಚಿಸಿದೆ. ನಾಳೆ ಬೆಳಿಗ್ಗೆ 10.30ಕ್ಕೆ ರಾಜ್ಯಪಾಲರು ಬಿಜೆಪಿ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನ ನೀಡಿದ ಪತ್ರ ಮತ್ತು ಫಡ್ನವೀಸ್ ಅವರು ರಾಜ್ಯಪಾಲರಿಗೆ ನೀಡಿರುವ ಅಗತ್ಯ ಸಂಖ್ಯೆಯ ಶಾಸಕರ ಸಹಿಯುಳ್ಳ ಪತ್ರವನ್ನು ಹಾಜರುಪಡಿಸಲು ಕೋರ್ಟ್ ಸೂಚಿಸಿತು.
ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದ ನಂತರ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವುದಾಗಿ ಪ್ರಕಟಿಸಿದೆ.
ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಸರಕಾರ, ಅಜಿತ್ ಪವಾರ್ ಮತ್ತು ವಕೀಲರಿಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಇವರೆಲ್ಲರೂ ನಾಳೆ ಅಫಿದವಿತ್ ಸಲ್ಲಿಸಬೇಕಾಗುತ್ತದೆ.
ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರೆ, ಬಿಜೆಪಿ ಪರ ಮುಕುಲ್ ರೋಹ್ಟಗಿ ವಾದಿಸಿದರು.