Advertisement

ವಿದ್ಯಾರ್ಥಿಗಳ ಭವಿಷ್ಯ ಮುಖ್ಯ; ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆ ಅರ್ಜಿ ಸುಪ್ರೀಂನಲ್ಲಿ ವಜಾ

01:59 PM Aug 17, 2020 | Nagendra Trasi |

ನವದೆಹಲಿ: ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2020ರ ಸೆಪ್ಟೆಂಬರ್ ನಲ್ಲಿ ನಡೆಸಲು ಉದ್ದೇಶಿಸಿದ್ದ ನೀಟ್(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಹಾಗೂ ಜೆಇಇ (ಜಂಟಿ ಪ್ರವೇಶ ಪರೀಕ್ಷೆ0 ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ (ಆಗಸ್ಟ್ 17, 2020) ವಜಾಗೊಳಿಸಿದೆ.

Advertisement

“ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಬೇಕೆಂದು ಕೈಗೊಂಡ ನಿರ್ಧಾರದ ಬಗ್ಗೆ ಮಧ್ಯಪ್ರವೇಶಿಸಲು ಯಾವುದೇ ಸಕಾರಣವಿಲ್ಲ. ನೀಟ್ ಹಾಗೂ ಜೆಇಇ ಪರೀಕ್ಷೆಯನ್ನು ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯವನ್ನು ಗಂಡಾಂತರಕ್ಕೆ ಸಿಲುಕಿಸಿದಂತಾಗುತ್ತದೆ” ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಜುಲೈ 3ರಂದು ಎಚ್ ಆರ್ ಡಿ (ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ) ಸಚಿವ ರಮೇಶ್ ಪೋಖ್ರಿಯಾಲ್ ಅವರು, ಜೆಇಇ (ಜಂಟಿ ಪ್ರವೇಶ ಮುಖ್ಯ ಪರೀಕ್ಷೆ) ಪರೀಕ್ಷೆಯನ್ನು ಸೆಪ್ಟಂಬರ್ 1ರಿಂದ 6ರವರೆಗೆ ನಡೆಸುವುದಾಗಿ ಘೋಷಿಸಿದ್ದರು. ನಂತರ ಜೆಇಇ ಅಡ್ವಾನ್ಸಡ್ ಪರೀಕ್ಷೆಯನ್ನು ಕೋವಿಡ್ 19 ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27ಕ್ಕೆ ಮುಂದೂಡಿರುವುದಾಗಿ ಪೋಖ್ರಿಯಾಲ್ ತಿಳಿಸಿದ್ದರು.

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜೆಇಇ ಮೈನ್ ಪರೀಕ್ಷೆಯನ್ನು ಸೆಪ್ಟೆಂಬರ್ 1ರಿಂದ 6ರವರೆಗೆ, ಜೆಇಇ (Advanced) ಪರೀಕ್ಷೆ ಸೆಪ್ಟೆಂಬರ್ 27ರಂದು ಹಾಗೂ ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದರು.

Advertisement

ಈ ಹಿಂದೆ ನೀಟ್ ಪರೀಕ್ಷೆಯನ್ನು ಜುಲೈ 26ರಂದು ನಡೆಸಲು ನಿರ್ಧರಿಸಿದ್ದ ಎನ್ ಟಿಎ, ಇದಕ್ಕಾಗಿ ಅಗತ್ಯ ಸಿದ್ದತೆ ಕೈಗೊಂಡಿತ್ತು. ನೀಟ್ ಗೆ ದೇಶಾದ್ಯಂತ ಒಟ್ಟು 16.84 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅಲ್ಲದೇ ಜೆಇಇ ಮುಖ್ಯ ಪರೀಕ್ಷೆಯನ್ನು ಜುಲೈ 18ರಿಂದ 23ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಜೆಇಇ ಮುಖ್ಯ ಪರೀಕ್ಷೆಗೆ 9 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ದೇಶದಲ್ಲಿ ದಿನೇ, ದಿನೇ ಕೋವಿಡ್ 19 ಪ್ರಕರಣ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಪೋಷಕರು ಎನ್ ಟಿಎ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ)ಗೆ ಪತ್ರ ಬರೆದು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next