ಮಸ್ಕಿ: ತಾಲೂಕಿನಲ್ಲಿ ನೈಜ ಭೋವಿ ಜನಾಂಗದವರಿಗೆ ಕಳೆದ ಮೂರು ತಿಂಗಳಿನಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಅಖೀಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘದ ಲಿಂಗಸುಗೂರು ತಾಲೂಕು ಅಧ್ಯಕ್ಷ ಶ್ರೀನಿವಾಸ ಭೋವಿ ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಜನಾಂಗದವರು ಜಾತಿ ಪ್ರಮಾಣ ಪತ್ರಗಳಿಗಾಗಿ ಮಸ್ಕಿ ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪರಿಶೀಲನೆ ನೆಪದಲ್ಲಿ ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದೆ ವಿಳಂಬ ಮಾಡುತ್ತಿದ್ದಾರೆ.
ಇದರಿಂದ ಸಮಾಜದ ನೂರಾರು ಜನ ಶೈಕ್ಷಣಿಕ ಮತ್ತು ಸರ್ಕಾರಿ ಕೆಲಸಗಳಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು. ಈಗಾಗಲೇ ಸರ್ಕಾರದ ಆದೇಶಗಳು ಹಾಗೂ ನ್ಯಾಯಾಲಯವೂ ಕೂಡ ಸ್ಪಷ್ಟವಾಗಿ ಆದೇಶ ಮಾಡಿ ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಆದೇಶ ಮಾಡಿದೆ. ಅಲ್ಲದೇ ಈಗಾಗಲೇ ಲಿಂಗಸುಗೂರು ತಹಶೀಲ್ದಾರರ ಆದೇಶವನ್ನು ರದ್ದುಪಡಿಸಿ ಜ.5. 2006ರಂದು ಬೆಂಗಳೂರು ಉತ್ಛ ನ್ಯಾಯಾಲಯ ಆದೇಶ ನೀಡಿದೆ. ಕರ್ನಾಟಕ ಸರ್ಕಾರದ ವಿ.ಎಸ್.ಉಗ್ರಪ್ಪ ನೇತೃತ್ವದ ವಿಧಾನ ಪರಿಷತ್ ವಿಶೇಷ ಸದನ ಸಮಿತಿಯೂ ಸ್ಪಷ್ಟ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದರು.
ಮಸ್ಕಿ ನೈಜ ಭೋವಿ ಜನಾಂಗದವರ ವಿರುದ್ಧ ವಡ್ಡರ್ ಸಮಾಜದವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಇಂತಹ ಸುಳ್ಳು ಆರೋಪ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಇತ್ತೀಚಿನ ದಿನಗಳಲ್ಲಿ ವಡ್ಡರ್ ಸಮಾಜದ ಬಂಧುಗಳು ಭೋವಿ ಜನಾಂಗದವರಿಗೆ ಎಸ್‌ಸಿ ಪ್ರಮಾಣ ಪತ್ರಗಳನ್ನು ನೀಡಬೇಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಯಮನಪ್ಪ ಮತ್ತು ಆತನ ಮಗ ಮರಿಯಪ್ಪ ಭೋವಿ ಇವರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆಂದು ಆಧಾರ ರಹಿತ ಆರೋಪ ಮಾಡುತ್ತಿರುವುದು ಸಮಂಜಸವಲ್ಲ ಎಂದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಭೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ, ಯಮನಪ್ಪ ಭೋವಿ ಮಸ್ಕಿ ಇತರರು ಇದ್ದರು.