Advertisement

ಬಿಎಸ್‌ 3 ವಾಹನ ಮಾರಾಟಕ್ಕೆ ತಡೆ: ಎ.1ರಿಂದ ಪರಿಷ್ಕೃತ ನಿಯಮ ಜಾರಿ

03:19 AM Mar 31, 2017 | Karthik A |

ಹೊಸದಿಲ್ಲಿ: ಮುಂದಿನ ತಿಂಗಳ ಒಂದನೇ ತಾರೀಕಿನಿಂದ ಬಿಎಸ್‌ – 3 ಮಾದರಿಯ ಸಂರಕ್ಷಣೆ ಹೊಂದಿರುವ ವಾಹನಗಳ ಮಾರಾಟ, ನೋಂದಣಿ ಇಲ್ಲ. ಹೀಗೆಂದು ಸು.ಕೋರ್ಟ್‌ ಬುಧವಾರ ತೀರ್ಪು ನೀಡಿದೆ. ದೇಶಾದ್ಯಂತ ಈ ತೀರ್ಪು ಅನ್ವಯವಾಗಲಿದ್ದು, ಇದರಿಂದಾಗಿ ವಾಹನೋದ್ಯಮಕ್ಕೆ ಬರೋಬ್ಬರಿ 12,000 ಕೋ. ರೂ.ಗಳಷ್ಟು ನಷ್ಟ ಉಂಟಾಗುವ ಅಂದಾಜು ಇದೆ. ಪರಿಸರ ಸಂರಕ್ಷಣೆ ಪರ ಹೋರಾಟಗಾರರು ಬೆಳವಣಿಗೆಯನ್ನು ಸ್ವಾಗತಿಸಿದರೆ, ಉದ್ದಿಮೆ ಪ್ರಮುಖರು ಆಘಾತದ ಪ್ರತಿಕ್ರಿಯೆ ನೀಡಿದ್ದಾರೆ. ಎ.1ರಿಂದ ವಾಹನಗಳಿಗೆ ಪರಿಸರ ಸಂರಕ್ಷಣೆಯ ಹೊಸ ನಿಯಮ ಭಾರತ್‌ ಸ್ಟೇಜ್‌-4 (ಬಿಎಸ್‌-4) ಜಾರಿಗೆ ಬರಲಿದೆ.

Advertisement

ನಿಷೇಧ ಹೇರಿ ಆದೇಶ: ವಾಹನೋದ್ಯಮಿಗಳ ಲಾಭಕ್ಕಿಂತ ಸಾರ್ವಜನಿಕರ ಆರೋಗ್ಯ ರಕ್ಷಣೆ ಹೆಚ್ಚು ಎಂದು ನ್ಯಾ| ಎಂ. ಬಿ.ಲೋಕುರ್‌ ಮತ್ತು ನ್ಯಾ| ದೀಪಕ್‌ ಗುಪ್ತಾ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮಾ.31ರವರೆಗೆ ಬಿಎಸ್‌-3 ವಾಹನಗಳ ಖರೀದಿ, ಮಾರಾಟ, ನೋಂದಣಿಗೆ ಅವಕಾಶವಿದೆ ಎಂದಿದೆ ಸುಪ್ರೀಂಕೋರ್ಟ್‌. ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರಗಳ ವಾಹನ ಸಹಿತ ಯಾವುದೇ ವಾಣಿಜ್ಯ ವಾಹನಗಳ ಮಾರಾಟ, ನೋಂದಣಿ ಸಾಧ್ಯವೇ ಇಲ್ಲ ಎಂದಿದೆ ಸುಪ್ರೀಂಕೋರ್ಟ್‌. ಯಾವ ಕಾರಣಕ್ಕಾಗಿ ಇಂಥ ತೀರ್ಪು ನೀಡಲಾಯಿತು ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ವಿವರವಾಗಿ ನೀಡುವುದಾಗಿ ಹೇಳಿದೆ ನ್ಯಾಯಪೀಠ.

ತೀರ್ಪು ನೀಡುವುದಕ್ಕಿಂತ ಮೊದಲು ಭಾರತ ವಾಹನ ಉತ್ಪಾದಕರ ಸಂಘಟನೆ (ಎಸ್‌ಐಎಎಂ) ಬಿಎಸ್‌-4 ಮಾದರಿಯ ಪರಿಸರ ಸಂರಕ್ಷಣೆ ಹೊಂದಿಲ್ಲದ 8.24 ಲಕ್ಷ ವಾಹನಗಳು ಉತ್ಪಾದಕರ ಬಳಿ ಇವೆ. ಈ ಪೈಕಿ 96 ಸಾವಿರ ವಾಣಿಜ್ಯ ವಾಹನಗಳು, ಸುಮಾರು 6 ಲಕ್ಷ ದ್ವಿಚಕ್ರ ವಾಹನಗಳು, ಸುಮಾರು 40 ಸಾವಿರ ತ್ರಿಚಕ್ರ ವಾಹನಗಳು ಎಂದು ಸಂಘಟನೆ ಪರ ವಕೀಲರು ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು.

‘ಉತ್ಪಾದಕರಿಗೆ ಎ. 1ರಿಂದ ಬಿಎಸ್‌-4 ಹೊಸ ಮಾದರಿಯ ಪರಿಸರ ಸಂರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿ ವಾಹನಗಳನ್ನು ಉತ್ಪಾದಿಸಬೇಕೆಂಬ ಅರಿವು ಇತ್ತು. ಹೀಗಿದ್ದರೂ ಅವರು ಪೂರ್ವ ನಿರ್ಧರಿತವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಸುಮ್ಮನಿದ್ದರು’ ಎಂದು ನ್ಯಾಯಪೀಠ ಬಲವಾಗಿ ಆಕ್ಷೇಪಿಸಿತು. ಅಮಿಕಸ್‌ ಕ್ಯೂರಿ ತಮ್ಮ ವರದಿಯಲ್ಲಿ  2010ರಲ್ಲಿಯೇ ವಾಹನ ಉತ್ಪಾದಕರು 2017ರ ಎ. 1ರಿಂದ ಬಿಎಸ್‌-3ರಿಂದ ಬಿಎಸ್‌ – 4ಕ್ಕೆ ಪರಿವರ್ತನೆಯಾಗಬೇಕೆಂಬ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರು. ಅವರಿಗೆ ಹಾಲಿ ಮಾದರಿಯ ವಾಹನಗಳ ಉತ್ಪಾದನೆಯನ್ನು ನಿಯಂತ್ರಿಸಲು ಸಾಕಷ್ಟು ಅವಧಿ ಇತ್ತು ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌, ಬಿಎಸ್‌ – 4 ಮಾದರಿಯ ವಾಹನಗಳಿಗೆ ದೇಶದಲ್ಲಿ ಉತ್ಕೃಷ್ಟವಾದ ಇಂಧನ ಲಭ್ಯವಿದೆ. ಅದಕ್ಕಾಗಿ ತೈಲ ಶುದ್ಧೀಕರಣಗಾರಗಳು 30 ಸಾವಿರ ಕೋಟಿ ರೂ. ವೆಚ್ಚ ಮಾಡಿ ತಮ್ಮ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿಕೊಂಡಿವೆ ಎಂದು ಹೇಳಿದರು. ಇದೇ ಸಂದರ್ಭ ಮಾರುತಿ ಸುಜುಕಿಯಂಥ ಕೆಲವೇ ವಾಹನ ಉತ್ಪಾದನಾ ಸಂಸ್ಥೆಗಳು ಬಿಎಸ್‌-4 ಮಾದರಿ ಪರಿಸರ ಸಂರಕ್ಷಣಾ ವ್ಯವಸ್ಥೆ ಇರುವ ಕಾರುಗಳನ್ನೇ ಉತ್ಪಾದಿಸಲು ಆರಂಭಿಸಿವೆ ಎಂದು ಮಾಹಿತಿ ನೀಡಲಾಯಿತು.

Advertisement

ಏನಿದು ಭಾರತ್‌ ಸ್ಟೇಜ್‌ ಅಥವಾ ಬಿಎಸ್‌
ನಮ್ಮ ದೇಶದಲ್ಲಿ ವಾಹನಗಳಲ್ಲಿ ಮಾಲಿನ್ಯ ಮಟ್ಟ ಗುರುತಿಸುವ ವ್ಯವಸ್ಥೆ ಇದು. ವಾಹನಗಳ ಎಂಜಿನ್‌ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೊರಸೂಸಬೇಕು ಎಂಬುದನ್ನು ನಿಗದಿಪಡಿಸಲಾಗುತ್ತದೆ. ದೇಶದಲ್ಲಿ 1991ರಲ್ಲಿ ಆರಂಭಿಸಿ, 1996ರಿಂದ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಸುಧಾರಿತ ಇಂಧನದ ಲಭ್ಯತೆ, ವಾಹನಗಳ ಹೊಗೆ ನಳಿಕೆಗಳಲ್ಲಿ ಸುಧಾರಣೆಗೆ ಕಂಪೆನಿಗಳು ನೆಪವೊಡ್ಡಿದ್ದರಿಂದ ಅಷ್ಟಾಗಿ ಜಾರಿಗೆ ಬರಲಿಲ್ಲ. 2000ನೇ ಇಸವಿಯ ಬಳಿಕ ಭಾರತ್‌ ಸ್ಟೇಜ್‌1 ಅನ್ನು ಜಾರಿ ಮಾಡಲಾಗಿತ್ತು. ಇದಕ್ಕೆ ಮೂಲ ಐರೋಪ್ಯ ರಾಷ್ಟ್ರಗಳು. ಅಲ್ಲಿ  ಯೂರೋ ನಾರ್ಮ್ಸ್ ಎಂಬ ಹೆಸರಲ್ಲಿ 6 ಮಟ್ಟಗಳನ್ನು ನಿಗದಿ ಮಾಡಲಾಗಿದೆ. ಸದ್ಯ ನಮ್ಮ ದೇಶದಲ್ಲಿ 4ನೇ ಹಂತ ಮಾತ್ರ ಜಾರಿ ಮಾಡಲಾಗುತ್ತಿದೆ. ಆರಂಭದಲ್ಲಿ ಬಿಎಸ್‌2 ಅನ್ನು ರಾಜಧಾನಿ ದಿಲ್ಲಿ ಮತ್ತು ಇತರ ಮೆಟ್ರೋಗಳಿಗೆ ನಿಗದಿ ಮಾಡಿ. ಬಿಎಸ್‌1ನ್ನು ದೇಶಾದ್ಯಂತ ಜಾರಿ ಮಾಡಲಾಯಿತು. ಯೂರೋ ಮಾನದಂಡ ಪ್ರಕಾರ ಭಾರತದ ಮಾಲಿನ್ಯ ಮಟ್ಟ ಹಿಂದುಳಿದಿರುವುದರಿಂದ 2019ರ ವೇಳೆಗೆ ನೇರವಾಗಿ ಬಿಎಸ್‌ 6 ಜಾರಿ ಮಾಡುವ ಗುರಿಯನ್ನು ಕೇಂದ್ರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next