ಹೊಸದಿಲ್ಲಿ : ದೇಶದ ಪ್ರಪ್ರಥಮ ಲೋಕಪಾಲ ನೇಮಕಕ್ಕೆ ಫೆಬ್ರವರಿ ಅಂತ್ಯದೊಳಗೆ ಹೆಸರುಗಳನ್ನು ಸೂಚಿಸುವಂತೆ ಸುಪ್ರೀಂ ಕೋರ್ಟ್ ಇಂದು ಗುರುವಾರ ಶೋಧನಾ ಸಮಿತಿಗೆ ಗಡುವು ವಿಧಿಸಿದೆ.
ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿಗಳಾದ ಜಸ್ಟಿಸ್ ರಂಜನ ಪ್ರಕಾಶ್ ದೇಸಾಯಿ ಅವರು ಶೋಧನಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಶೋಧನಾ ಸಮಿತಿಗೆ ತನ್ನ ಕೆಲಸ ಕಾರ್ಯಗಳನ್ನು ಮುಗಿಸಲು ಅವಶ್ಯವಿರುವ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸುವಂತೆಯೂ ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಪೀಠ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ಜಸ್ಟಿಸ್ ಎಲ್ ಎನ್ ರಾವ್, ಜಸ್ಟಿಸ್ ಎಸ್ ಕೆ ಕೌಲ್ ಅವರನ್ನು ಕೂಡ ಒಳಗೊಂಡಿರುವ ಸುಪ್ರೀಂ ಪೀಠವು, ಮುಂಧಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ನಿಗದಿಸಿದೆ.
ಕೇಂದ್ರ ಸರಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಶೋಧನಾ ಸಮಿತಿಗೆ ಕೆಲವೊಂದು ಸಮಸ್ಯೆಗಳಿವೆ; ಸರಿಯಾದ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲ ಇಲ್ಲದಿರುವುದರಿಂದ ಅದಕ್ಕೆ ಸಭೆ, ಚರ್ಚೆ ನಡೆಸುವುದಕ್ಕೆ ಅಸಾಧ್ಯವಾಗಿದೆ ಎಂದು ಹೇಳಿದರು. ಅಂತೆಯೇ ಸುಪ್ರೀಂ ಕೋರ್ಟ್ ಈ ಆವಶ್ಯಕತೆಗಳನ್ನು ಪೂರೈಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿತು.