ನವದೆಹಲಿ: ದೇಶಾದ್ಯಂತ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಇಂತಹ ಪ್ರಕರಣಗಳ ವಿಚಾರಣೆಗೆ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಛ ನ್ಯಾಯಾಲಯವು ನಿರ್ದೇಶನ ನೀಡಿದೆ.
ಯಾವೆಲ್ಲಾ ಜಿಲ್ಲೆಗಳಲ್ಲಿ 100ಕ್ಕೂ ಮಿಕ್ಕಿದ ಇಂತಹ ಪ್ರಕರಣಗಳ ವಿಚಾರಣೆ ಬಾಕಿ ಇದೆಯೋ ಅಲ್ಲೆಲ್ಲಾ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸುಪ್ರೀ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಇಂತಹ ವಿಶೇಷ ನ್ಯಾಯಾಲಯಗಳ ಕಾರ್ಯಾಚರಣೆಯನ್ನು ಖಚಿತಪಡಿಸಲು ಉಚ್ಛ ನ್ಯಾಯಾಲವು 60 ದಿನಗಳ ಗಡುವನ್ನೂ ಸಹ ಕೆಂದ್ರಕ್ಕೆ ವಿಧಿಸಿದೆ.
ಈ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅಗತ್ಯವಾಗಿರುವ ನಿಧಿ ಸೌಲಭ್ಯ, ನ್ಯಾಯಾಧೀಶರ ನೇಮಕ, ಹಾಗೂ ನ್ಯಾಯಾಲಯ ಸಿಬ್ಬಂದಿಗಳು ಮತ್ತು ವಿಶೇಷ ಪ್ರಾಸಿಕ್ಯೂಟರ್ ಗಳ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸಹ ಉಚ್ಛ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟಾರೆ ಒಂದೂವರೆ ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಆದರೆ ಇವುಗಳ ವಿಚಾರಣೆ ನಡೆಸಲು ಇರುವ ಒಟ್ಟಿ ಪೋಕ್ಸೋ ನ್ಯಾಯಾಲಯಗಳ ಸಂಖ್ಯೆ 670 ಮಾತ್ರ ಎಂಬ ವಿಚಾರ ವರದಿಯೊಂದರಲ್ಲಿ ಬಹಿರಂಗಗೊಂಡಿತ್ತು.
ಪೋಕ್ಸೋ ಕಾಯ್ದೆಗೆ ಮಾಡಲಾಗಿದ್ದ ತಿದ್ದುಪಡಿಯನ್ನು ರಾಜ್ಯಸಭೆಯು ಅಂಗೀಕರಿಸಿದ ಮರುದಿನವೇ ಸುಪ್ರೀಂ ಕೋರ್ಟ್ ಈ ನಿರ್ದೇಶನವನ್ನು ನೀಡಿರುವುದು ಉಲ್ಲೇಖನೀಯವಾಗಿದೆ. ಮಕ್ಕಳ ಮೇಲೆ ನಡೆಸಲಾಗುವ ಪೈಶಾಚಿಕ ಲೈಂಗಿಕ ದೌರ್ಜನ್ಯಗಳ ಆರೋಪ ಸಾಬೀತುಗೊಂಡಲ್ಲಿ ಅಂತಹ ಅಪರಾಧಿಗಳಿಗೆ ಮರಣ ದಂಡನೆಯನ್ನು ವಿಧಿಸುವ ಮತ್ತು ಅಪ್ರಾಪ್ತರ ಮೇಲೆ ನಡೆಸುವ ಇನ್ನಿತರ ಸ್ವರೂಪದ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ವಿಚಾರವನ್ನು ಈ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.