ಹೊಸದಿಲ್ಲಿ : ನಿಷೇಧಿಸಲ್ಪಟ್ಟಿದ್ದ ನೋವು ನಿವಾರಕ ಸಾರಿಡಾನ್, ಪಿರಿಟಾನ್, ಡಾರ್ಟ್ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಇದೇ ವೇಳೆ ಈ ಮಾತ್ರೆಗಳ ಸಹಿತ 328 ಔಷಧಗಳ ಮೇಲಿನ ಮಾರಾಟ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳಿಗೆ ಸಂಬಂಧಿಸಿ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ಸೆ.13ರಂದು 328 ಬಗೆಯ ನಿರ್ದಿಷ್ಟ ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಮಾತ್ರವಲ್ಲದೆ ಇನ್ನೂ ಆರು ಬಗೆಯ ಔಷಧಗಳ ಮೇಲೆ ತತ್‌ಕ್ಷಣದಿಂದ ನಿರ್ಬಂಧ ಜಾರಿಗೊಳಿಸಿತ್ತು.
ಈ ಹಿಂದೆ 2016ರಲ್ಲೂ ಕೇಂದ್ರ ಸರಕಾರ 349 ಎಫ್ ಡಿ ಸಿಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿತ್ತು. ಆದರೆ ಅವುಗಳ ಉತ್ಪಾದಕರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿದ್ದವು.
2017ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಡ್ರಗ್ಸ್ ಟೆಕ್ನಿಕಲ್ ಅಡ್‌ವೈಸರಿ ಬೋರ್ಡ್ (ಡಿಟಿಎಬಿ) ವಿಷಯವನ್ನು ಪರೀಶೀಲಿಸಿ ಕೇಂದ್ರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಎಫ್ ಡಿ ಸಿಗಳನ್ನು ನಿಷೇಧಿಸುವ ಶಿಫಾರಸು ಮಾಡಿತ್ತು.ಈ ಔಷಧಗಳಲ್ಲಿ ಯಾವುದೇ ರೀತಿಯ ಚಿಕಿತ್ಸಾತ್ಮಕ ಅಂಶಗಳು ಇಲ್ಲ ಮತ್ತು ಇವುಗಳ ಸೇವನೆಯಿಂದ ಮನುಷ್ಯರ ಆರೋಗ್ಯಕ್ಕೆ ಅಪಾಯವಿದೆ ಎಂದು ಅದು ಹೇಳಿತ್ತು.
ಇದಕ್ಕೆ ಮೊದಲು ಕೇಂದ್ರ ಸಕಾರ ನೇಮಿಸಿದ್ದ ಪರಿಣತರ ಸಮಿತಿ ಕೂಡ ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.