ನವದೆಹಲಿ: ತಮಿಳುನಾಡಿನ ಗ್ರಾಮೀಣ ಜಲ್ಲಿಕಟ್ಟು ಕ್ರೀಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಮಿಳುನಾಡು ಪ್ರಾಣಿ ಹಿಂಸೆ ತಡೆ ಕಾಯ್ದೆ-1960ಗೆ ತಿದ್ದುಪಡಿ ಮಾಡಿ ತಮಿಳುನಾಡು ವಿಧಾನ ಸಭೆಯಲ್ಲಿ ಮಂಡಿಸಿದ್ದ ಮಸೂದೆಗೆ ತಡೆ ನೀಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದ್ದು, ಆ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದೆ.
ಇದೇ ಸಂದರ್ಭದಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2016ರ ಜನವರಿ 7ರಂದು ಹೊರಡಿಸಿದ್ದ ಪ್ರಕಟಣೆ ವಾಪಸ್ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಏತನ್ಮಧ್ಯೆ ಜಲ್ಲಿಕಟ್ಟು ಕ್ರೀಡೆ ಅರ್ಜಿ ವಿಚಾರಣೆ ವೇಳೆ ತಮಿಳುನಾಡು ವಿಧಾನಸಭೆ ಕೈಗೊಂಡ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.
ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಕ್ರೀಡೆ ನಡೆಯುವ ವೇಳೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧ ಖಂಡಿಸಿ ಸತತ ಐದು ದಿನಗಳ ಕಾಲ ಲಕ್ಷಾಂತರ ಜನರ ಹೋರಾಟ, ಬಂದ್ ಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಮಿಳುನಾಡು ಪ್ರಾಣಿ ಹಿಂಸಾ ಕಾಯ್ದೆ 1960ರ ತಿದ್ದುಪಡಿ ಮಾಡಿ ಅಧ್ಯಾದೇಶ ಹೊರಡಿಸಲು ಅನುವು ಮಾಡಿಕೊಟ್ಟಿತ್ತು. ಬಳಿಕ ಅಧ್ಯಾದೇಶಕ್ಕೆ ಕೇಂದ್ರ ಸರ್ಕಾರ ನಂತರ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಬಳಿಕ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅಧ್ಯಾದೇಶಕ್ಕೆ ಅಂತಿಮ ಅಂಕಿತ ಹಾಕುವ ಮೂಲಕ ನಿಷೇಧಿತ ಜಲ್ಲಿಕಟ್ಟು ಸಕ್ರಮಗೊಂಡಿತ್ತು. ಆದರೆ ಜಲ್ಲಿಕಟ್ಟು ಕ್ರೀಡೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಹೊಸ ಕಾಯ್ದೆ ಜಾರಿ ಮಾಡಲಾಗಿತ್ತು.
ಏನಿದು ವಿವಾದ?
2011ರಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ, ಗೂಳಿಗಳನ್ನು ತರಬೇತುಗೊಳಿಸಿ ಕ್ರೀಡೆಗೆ ಬಳಸುವುದನ್ನು ನಿಷೇಧಿಸಿತ್ತು. 2014ರಲ್ಲಿ ಇದನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ ಪ್ರಾಣಿ ಹಿಂಸೆಗೆ ಕಾರಣ ವಾಗುವ ಜಲ್ಲಿಕಟ್ಟು, ಕರ್ನಾಟಕದ ಕಂಬಳ, ಮಹಾರಾಷ್ಟ್ರದ ಎತ್ತಿನಗಾಡಿ ಓಟವನ್ನು ನಿಷೇಧಿಸಿತ್ತು.