ಹೊಸದಿಲ್ಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸುವ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ತೆರಿಗೆ ಅಧಿಕಾರಿಗಳಿಗೆ ಇದೆಯೇ ಇಲ್ಲವೇ ಎಂಬ ಕಾನೂನು ಪ್ರಶ್ನೆಯ ಪರಾಮರ್ಶೆಗೆ ಸುಪ್ರೀಂ ಕೋರ್ಟ್ ಒಪ್ಪಿದೆ.
ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಅನಿರುದ್ಧ ಬೋಸ್ ಅವರನ್ನು ಒಳಗೊಂಡ ರಜಾಕಾಲದ ಸುಪ್ರೀಂ ಕೋರ್ಟ್ ಪೀಠ, ಈ ಬಗ್ಗೆ ಉತ್ತರಿಸುವಂತೆ ಇಂದು ಬುಧವಾರ ಕೇಂದ್ರ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಸಿಜಿಎಸ್‌ಟಿ ಕಾಯಿದೆಯಡಿ ತೆರಿಗೆ ಪಾವತಿ ತಪ್ಪಿಸುವ ವ್ಯಕ್ತಿಯನ್ನು ಬಂಧಿಸುವ ಇಲಾಖಾಧಿಕಾರಿಗಳ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಜಿಎಸ್‌ಟಿ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಲ್ಲಿ ಬೇರೆ ಬೇರೆ ಹೈಕೋರ್ಟ್ ಗಳು ವಿಭಿನ್ನ ಅಭಿಪ್ರಾಯಗಳನ್ನು ತಳೆದಿವೆ. ಆದುದರಿಂದ ಅಧಿಕಾರಿಗಳಿಗೆ ಇರುವ ಬಂಧನದ ಅಧಿಕಾರಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಶ್ನೆ ಉದ್ಭವವಾಗಿದೆ ಎಂದು ಪೀಠವು ಹೇಳಿತು.
ಜಿಎಸ್‌ಟಿ ಪಾವತಿ ವಂಚಿಸುವ ವ್ಯಕ್ತಿಗಳಿಗೆ ಬಂಧನದಿಂದ ಯಾವುದೇ ರಕ್ಷಣೆ ನೀಡಲಾಗದು ಎಂಬ ತೆಲಂಗಾಣ ಹೈಕೋರ್ಟ್ ತೀರ್ಪನ್ನು ತಾನು ಈ ಹಿಂದೆ ಎತ್ತಿ ಹಿಡಿದಿದ್ದು, ಜಿಎಸ್‌ಟಿ ತೆರಿಗೆ ವಂಚಿಸುವ ವ್ಯಕ್ತಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಾಗ ಎಲ್ಲ ಹೈಕೋರ್ಟ್‌ಗಳು ಸದ್ಯಕ್ಕೆ ತೆಲಂಗಾಣ ಹೈಕೋರ್ಟ್ ತೀರ್ಪನ್ನು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.